ಸೋಮವಾರಪೇಟೆ, ಏ. ೧೨: ತಾ. ೧೪ರಂದು (ನಾಳೆ) ನಡೆಯಲಿರುವ ಅಂಬೇಡ್ಕರ್ ಜಯಂತಿಯನ್ನು ಅಚ್ಚುಕ್ಕಟ್ಟಾಗಿ ನಡೆಸುವ ಸಂಬAಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಲಿತಪರ ಸಂಘಟನೆಗಳ ಮುಖಂಡರನ್ನು ಒಳಗೊಂಡAತೆ ಪೂರ್ವಭಾವಿ ಸಭೆ ನಡೆಯಿತು. ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ ಅವರು, ಕಾರ್ಯಕ್ರಮ ಆಯೋಜಕರಿಂದ ಕಾರ್ಯಕ್ರಮದ ಸಮಗ್ರ ಮಾಹಿತಿ ಪಡೆದರು. ಮೆರವಣಿಗೆ ಹೊರಡುವ ಸ್ಥಳ ಹಾಗೂ ಸಮಯ, ಸ್ತಬ್ಧಚಿತ್ರಗಳ ಸಂಚಾರದ ಬಗ್ಗೆ ಪ್ರಮುಖರು ಮಾಹಿತಿ ನೀಡಿದರು.

ಬೆಳಿಗ್ಗೆ ೧೦.೩೦ಕ್ಕೆ ವಿವೇಕಾನಂದ ವೃತ್ತದಿಂದ ಸ್ತಬ್ಧಚಿತ್ರಗಳ ಸಹಿತ ಮೆರವಣಿಗೆ ನಡೆಸಲಾಗುವುದು. ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಅಂಬೇಡ್ಕರ್ ಸರ್ಕಲ್‌ಗೆ ತೆರಳಿ ಸಂವಿಧಾನ ಶಿಲ್ಪಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ವಾಪಸ್ ಖಾಸಗಿ ಬಸ್ ನಿಲ್ದಾಣಕ್ಕೆ ಮೆರವಣಿಗೆ ಆಗಮಿಸಿ ಸಭಾ ಕಾರ್ಯಕ್ರಮ ನಡೆಸಲಾಗುವುದು ಎಂದು ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಪ್ರಮುಖರು ಸಭೆಗೆ ಮಾಹಿತಿ ನೀಡಿದರು.

ಅಂಬೇಡ್ಕರ್ ಜಯಂತಿ ಸೋಮವಾರ ಇರುವುದರಿಂದ ಪಟ್ಟಣ ವ್ಯಾಪ್ತಿಯ ಮದ್ಯದಂಗಡಿಗಳನ್ನು ಸಂಜೆಯವರೆಗೆ ಬಂದ್ ಮಾಡಿಸುವ ಬಗ್ಗೆ ಸಭೆಯಲ್ಲಿದ್ದ ಕೆಲವರು ಸಲಹೆ ನೀಡಿದರು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಹೇಳಿದರು. ವಾರದ ಸಂತೆ ದಿನವಾದ್ದರಿಂದ ಪಟ್ಟಣದಲ್ಲಿ ಹೆಚ್ಚಿನ ವಾಹನ ಹಾಗೂ ಜನಸಂದಣಿ ಏರ್ಪಡಲಿದೆ. ಸ್ತಬ್ಧಚಿತ್ರಗಳ ಮೆರವಣಿಗೆ ಸಂದರ್ಭ ಕೆಲವು ರಸ್ತೆಗಳನ್ನು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಉತ್ತಮ ಎಂದು ಪದಾಧಿಕಾರಿಗಳು ತಿಳಿಸಿದರು.

ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಪಟ್ಟಣ ಮಾತ್ರವಲ್ಲದೇ ಸುತ್ತಮುತ್ತಲ ಗ್ರಾಮೀಣ ಭಾಗದಿಂದಲೂ ಜನರು ಆಗಮಿಸಲಿದ್ದಾರೆ. ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆಗೊಳಿಸುವುದು ಹಾಗೂ ಮೆರವಣಿಗೆ ಸಂದರ್ಭ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಮನವಿ ಮಾಡಿದರು.

ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ನಡೆಸಬೇಕು. ಡಿ.ಜೆ. ಬಳಕೆಗೆ ಮುಂದಾಗದೇ ಅಂಬೇಡ್ಕರ್ ಅವರ ಬಗೆಗಿನ ಕ್ರಾಂತಿ ಗೀತೆಗಳು, ಸಂದೇಶಗಳನ್ನು ಒಳಗೊಂಡ ಧ್ವನಿಸುರುಳಿ ಪ್ರಸಾರ ಮಾಡಬೇಕು. ಮಾದರಿ ಕಾರ್ಯಕ್ರಮವಾಗಿ ಜಯಂತಿ ಆಚರಿಸಬೇಕು. ಎಲ್ಲಾ ಸಂದರ್ಭದಲ್ಲೂ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ ಎಂದು ಮುದ್ದು ಮಹದೇವ ತಿಳಿಸಿದರು.

ಸಭೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಪದಾಧಿಕಾರಿಗಳಾದ ಬಿ.ಈ. ಜಯೇಂದ್ರ, ಜೋಯಪ್ಪ ಹಾನಗಲ್ಲು, ಟಿ.ಈ. ಸುರೇಶ್, ದಲಿತ ಸಂಘಟನೆಗಳ ಮುಖಂಡರಾದ ಎಸ್.ಎ. ಪ್ರತಾಪ್, ಗಿರೀಶ್, ಬಿ.ಬಿ. ಆನಂದ್, ಯೋಗೇಶ್, ಪ್ರಮುಖರಾದ ಚಿಂತು, ಪ್ರವೀಣ್, ಸುರೇಶ್, ಸುಬ್ರಮಣಿ ಸೇರಿದಂತೆ ಇತರರು ಇದ್ದರು.