ಛಿರಾಯಲ್ ಫ್ರೆಂಡ್ಸ್ ಕುಶಾಲನಗರ ಪ್ರಥಮ

ಕೂಡಿಗೆ, ಏ. ೧೨: ಕೂಡಿಗೆಯ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ದ್ವಿತೀಯ ವರ್ಷದ ಜೈ ಭೀಮ್ ಕಪ್ ವಾಲಿಬಾಲ್ ಲೀಗ್ ಪಂದ್ಯಾವಳಿಯಲ್ಲಿ ಕುಶಾಲನಗರದ ರಾಯಲ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದು ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ದಿಲೀಪ್ ಫ್ರೆಂಡ್ಸ್, ತೃತೀಯ ಸ್ಥಾನ ಶೈನಿಂಗ್ ಸ್ಟಾರ್, ನಾಲ್ಕನೇ ಸ್ಥಾನ ಹಂಟರ್ ಈಗಲ್ ತಂಡ ಪಡೆದುಕೊಂಡಿತು. ಎರಡು ದಿನಗಳವರೆಗೆ ಕೂಡಿಗೆ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಣ್ಣಕ್ಕ ನೆರವೇರಿಸಿದರು.

ಕ್ರೀಡಾಕೂಟಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಶುಭ ಹಾರೈಸಿದರು. ಬಹುಮಾನ ವಿತರಣೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎಸ್. ಅರುಣ್ ರಾವ್ ನೆರವೇರಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಐ.ಎನ್.ಟಿ.ಸಿ. ಜಿಲ್ಲಾ ಅಧ್ಯಕ್ಷ ಅಣ್ಣಯ್ಯ, ರಾಜ್ಯಮಟ್ಟದ ಕ್ರೀಡಾಪಟು ಆದಂ, ಜಿಲ್ಲಾ ನೇಕಾರ ಒಕ್ಕೂಟದ ಕಾರ್ಯದರ್ಶಿ ಕೆ.ಕೆ. ನಾಗರಾಜಶೆಟ್ಟಿ, ಪ್ರಗತಿ ಪರ ರೈತ ರಾಮೇಗೌಡ, ಶೈನಿಂಗ್ ಸ್ಟಾರ್ ಸಮಿತಿ ಅಧ್ಯಕ್ಷ ಸಚಿನ್, ಪ್ರಮುಖರಾದ ಶರತ್, ಸುದರ್ಶನ್, ಮಹೇಶ್, ಮನೋಜ್, ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ಲೀಗ್ ಮಾದರಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು.