ಮಡಿಕೇರಿ, ಏ. ೧೧: ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘಕ್ಕೆ ಫೆ. ೧೬ ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಉಚ್ಚನ್ಯಾಯಾಲಯದ ಆದೇಶದ ಅನ್ವಯ ನಡೆದು ಫಲಿತಾಂಶ ಪ್ರಕಟಗೊಂಡಿದೆ. ನಾಲ್ಕು ಸ್ಥಾನಗಳಿಗೆ ನಡೆದಿದ್ದ ಮತದಾನದಲ್ಲಿ ಬಿಜೆಪಿ ಬೆಂಬಲಿತರು ಜಯ ಸಾಧಿಸಿದ್ದಾರೆ.
ಚುನಾವಣೆಯ ಮತ ಎಣಿಕೆ ಫಲಿತಾಂಶ ಪ್ರಕಟಗೊಳಿಸಲು ರಾಜ್ಯ ಉಚ್ಚನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ಹಿನ್ನೆಲೆ ಈ ಹಿಂದೆ ಮತ ಎಣಿಕೆ ನಡೆದಿರಲಿಲ್ಲ. ಇದೀಗ ನ್ಯಾಯಾಲಯದಿಂದ ಮತ್ತೆ ಬಂದ ಹೊಸ ಆದೇಶದಂತೆ ಮತ ಎಣಿಕೆಯೊಂದಿಗೆ ಫಲಿತಾಂಶ ಪ್ರಕಟವಾಗಿದೆ. ಸಂಘದ ಸಭಾಂಗಣದಲ್ಲಿ ಮತ ಎಣಿಕೆ ಪ್ರಕ್ರಿಯೆ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘದ ಉಪನಿಬಂಧಕಿ ಶೈಲಜಾ ನೇತೃತ್ವದಲ್ಲಿ ನಡೆಯಿತು.
ಒಟ್ಟು ೧೫ ನಿರ್ದೇಶಕ ಸ್ಥಾನದ ಪೈಕಿ ೧೧ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಆದರೆ, ಮಡಿಕೇರಿ ತಾಲೂಕಿನ ೩ ಸಾಮಾನ್ಯ ಹಾಗೂ ೧ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ನಿರ್ದೇಶಕ
(ಮೊದಲ ಪುಟದಿಂದ) ಸ್ಥಾನದ ಕಣದಲ್ಲಿ ಒಟ್ಟು ೮ ಮಂದಿಯಿದ್ದ ಹಿನ್ನೆಲೆ ಚುನಾವಣೆ ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮತದಾನ ಅವಕಾಶದಿಂದ ತಮಗೆ ವಂಚನೆಯಾಗಿದೆ ಎಂದು ಆಕ್ಷೇಪಿಸಿ ಕೆಲವು ಸದಸ್ಯರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತ್ಯೇಕ ಬ್ಯಾಲೆಟ್ ಮೂಲಕ ೯೦ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಿ ಪ್ರಕರಣ ಪೂರ್ಣ ಇತ್ಯರ್ಥದ ತನಕ ಫಲಿತಾಂಶ ಪ್ರಕಟಗೊಳಿಸದಂತೆ ಆದೇಶ ನೀಡಿತ್ತು. ಸಂಘ ಇದನ್ನು ಪ್ರಶ್ನಿಸಿ ಮತ ಎಣಿಕೆ ಮಾಡಲು ನ್ಯಾಯಾಲಯದಿಂದ ಮರು ಆದೇಶ ತರುವಲ್ಲಿ ಯಶಸ್ವಿಯಾಗಿತ್ತು.
ಮತ ಎಣಿಕೆ ಕಾರ್ಯ
ಕೋರ್ಟ್ ಮೂಲಕ ಮತದಾನ ಮಾಡಲು ಅವಕಾಶ ಪಡೆದು ಕೊಂಡಿದ್ದವರ ಮತ ಪತ್ರ ಸೇರಿದಂತೆ ಚಲಾವಣೆಗೊಂಡಿದ್ದ ಮತಗಳ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರಿ ನೇತೃತ್ವದ ತಂಡ ನಡೆಸಿತು.
ಮಡಿಕೇರಿ ತಾಲೂಕು ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ಮುದ್ದಂಡ ಬಿ. ದೇವಯ್ಯ, ನಾಪಂಡ ರವಿಕಾಳಪ್ಪ, ಚೆಟ್ಟಿಮಾಡ ಪ್ರಶಾಂತ್, ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎ. ಹರೀಶ್ ಹೆಚ್ಚು ಮತ ಗಳಿಸಿ ಗೆಲುವು ದಾಖಲಿಸಿದರು. ಸಾಮಾನ್ಯ ಕ್ಷೇತ್ರದಿಂದ ಎದುರಾಳಿಯಾಗಿ ಸ್ಪರ್ಧಿಸಿದ್ದ ಕಿಮ್ಮುಡಿರ ಜಗದೀಶ್, ಬಿದ್ದಾಟಂಡ ತಮ್ಮಯ್ಯ, ಸೂದನ ಈರಪ್ಪ ಹಾಗೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಂ. ರುಕ್ಮಿಣಿ ಪರಾಭವಗೊಂಡರು. ಸಾಮಾನ್ಯ ಕ್ಷೇತ್ರಕ್ಕೆ ಪ್ರತ್ಯೇಕ ಬ್ಯಾಲೆಟ್ ಮೂಲಕ ಮತಚಲಾಯಿಸಲು ಅವಕಾಶ ಪಡೆದಿದ್ದ ೯೦ ಮಂದಿ ಪೈಕಿ ೬೦ ಮಂದಿ ಹಾಗೂ ಇತರ ೧೮೨ ಮತದಾರರು ಮತ ಚಲಾವಣೆ ಮಾಡಿದ್ದರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ೨೯೩ ಮಂದಿ ಸೇರಿದಂತೆ ಒಟ್ಟು ೩೫೩ ಮಂದಿ ಮತದಾನ ಮಾಡಿದ್ದರು. ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್ಗಳ ಸಮಕ್ಷಮದಲ್ಲಿ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆದು ಫಲಿತಾಂಶ ೨ ತಿಂಗಳ ಬಳಿಕ ಘೋಷಣೆಗೊಂಡಿತು.
ಇದೇ ಸಂದರ್ಭ ಚುನಾಯಿತ ನಾಲ್ವರು ಸೇರಿದಂತೆ ಅವಿರೋಧವಾಗಿ ಆಯ್ಕೆಯಾಗಿರುವ ಮಾಚಿಮಂಡ ಸುವಿನ್ ಗಣಪತಿ, ಕಾಕೂರು ಎಂ. ಸಂದೀಪ್, ಶಿಚಾರರ ಸುರೇಶ್, ರಾಬಿನ್ ದೇವಯ್ಯ, ಗೌತಮ್, ಎಸ್.ಪಿ. ಪೊನ್ನಪ್ಪ, ಹಾಲುಮತದ ಎಸ್. ಮಹೇಶ್, ಪಾಡಿಯಮ್ಮಂಡ ಮಹೇಶ್, ಡಿ.ಯು. ವರದರಾಜ್ ಅರಸ್, ಕಡ್ಲೇರ ತುಳಸಿ ಮೋಹನ್, ಚೆಟ್ರಂಡ ಲೀಲಾ ಮೇದಪ್ಪ ಅವರುಗಳಿಗೆ ಚುನಾವಣಾಧಿಕಾರಿ ಪ್ರಮಾಣ ಪತ್ರ ವಿತರಿಸಿದರು.
ಬಿಜೆಪಿಯಿಂದ ಸಂಭ್ರಮಾಚರಣೆ
ಬಿಜೆಪಿ ಬೆಂಬಲಿತ ನಾಲ್ವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ, ಸಿಹಿ ಹಂಚಿ ವಿಜೇತರಿಗೆ ಹಾರ ಹಾಕಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಡಿಕೇರಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಮುದ್ದಂಡ ಡೀನ್ ಬೋಪಣ್ಣ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಕವನ್ ಕಾವೇರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.