ಕುಶಾಲನಗರ, ಏ. ೭: ಎನ್ಎಸ್ಯುಐ ಕರ್ನಾಟಕ ಸಂಘಟನೆ ವತಿಯಿಂದ ವಿದ್ಯಾರ್ಥಿ ಗಳ ಹಕ್ಕುಗಳಿಗಾಗಿ ಕೊಡಗು ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿ ನ್ಯಾಯ ಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರಾಜ್ಯದ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ವಿದ್ಯಾರ್ಥಿ ನ್ಯಾಯಯಾತ್ರೆ ಎಂಬ ಮಹತ್ವಾಕಾಂಕ್ಷಿ ಪ್ರಯತ್ನ ಇದಾಗಿದೆ.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸಮರ್ಪಕ ವಿದ್ಯಾರ್ಥಿ ವೇತನ ವಿತರಣೆ, ಹಾಸ್ಟೆಲ್ ವ್ಯವಸ್ಥೆಯ ಸುಧಾರಣೆ, ವೃತ್ತಿ ಮಾರ್ಗ ದರ್ಶನ ಮತ್ತು ಉದ್ಯೋಗಾ ವಕಾಶಗಳ ಹೆಚ್ಚಳ, ಡ್ರಗ್ಸ್ ಮತ್ತು ರಾಗಿಂಗ್ ಪಿಡುಗು ನಿರ್ಮೂಲನೆ, ವಿದ್ಯಾರ್ಥಿನಿಯರ ಸುರಕ್ಷತೆ ಸರ್ಕಾರಿ ವಿದ್ಯಾ ಸಂಸ್ಥೆಗಳ ಬಲವರ್ಧನೆ, ಕರ್ನಾಟಕ ವಿದ್ಯಾರ್ಥಿ ಹಿತ ಮಸೂದೆ ಜಾರಿ ಹಾಗೂ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ತಡೆಗಟ್ಟುವಿಕೆ ಬಗ್ಗೆ ವಿಶ್ವವಿದ್ಯಾಲಯ ಕುಲಪತಿ ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸೂಕ್ತ ಬೆಂಬಲ ಕೋರಿದರು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅಶೋಕ ಸಂಗಪ್ಪ ಆಲೂರ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಎನ್ಎಸ್ಯುಐ ಕರ್ನಾಟಕ ಸಂಘಟನೆ ರಾಷ್ಟ್ರೀಯ ಸಂಯೋಜಕ ಹೃತಿಕ್ ರವಿ, ಆನಂತ್ ಕಟೀಲ್, ಶಿವಕುಮಾರ್, ತ್ರಿನೇಶ್, ಕಾರ್ತಿಕ್ ಮತ್ತಿತರರು ತಂಡದಲ್ಲಿದ್ದರು.