ಚೆಯ್ಯಂಡಾಣೆ, ಏ. ೭: ಖಾಸಗಿ ಬಸ್ ಮತ್ತು ಓಮಿನಿ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಒಂದೇ ಕುಟುಂಬದ ಏಳು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಾಪೋಕ್ಲು ವೀರಾಜಪೇಟೆ ಮುಖ್ಯರಸ್ತೆಯ ಬಾವಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ನಾಪೋಕ್ಲು ಕಡೆಯಿಂದ ವೀರಾಜಪೇಟೆ ಕಡೆಗೆ ಹೊದವಾಡ ಕೊಟ್ಟಮುಡಿ ಗ್ರಾಮದ ಒಂದೇ ಕುಟುಂಬದ ಮಗು ಸೇರಿದಂತೆ ಏಳು ಮಂದಿ ಸದಸ್ಯರು ಪ್ರಯಾಣಿಸುತ್ತಿದ್ದ ಓಮಿನಿ ಕಾರು, ವೀರಾಜಪೇಟೆ ಕಡೆಯಿಂದ ನಾಪೋಕ್ಲು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಓಮಿನಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊAಡಿದ್ದು, ಖಾಸಗಿ ಬಸ್ಸಿನ ಬಲಭಾಗಕ್ಕೂ ಹಾನಿಯಾಗಿದೆ. ಅಪಘಾತದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹೊದವಾಡ ಕೊಟ್ಟಮುಡಿ ಗ್ರಾಮದ ನಿವಾಸಿಗಳಾದ ಚಾಲಕ ಅಪ್ಪಣ್ಣ ಸೇರಿದಂತೆ ರವಿ, ಶಾಂತಿ, ಶಾರದ, ಅಕ್ಕಮ್ಮ, ಚಂದನ, ಮುತ್ತಕ್ಕ ಎಂಬವರಿಗೆ ಕೈಕಾಲು ಮತ್ತು ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ನಾಪೋಕ್ಲು ಸಮುದಾಯ ಅರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. - ಅಶ್ರಫ್