ವೀರಾಜಪೇಟೆ, ಏ. ೭: ನಿರಂತರವಾಗಿ ಬಿ.ಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲದೆ ಸಮಸ್ಯೆ ಆಗಿದೆ ಎಂದು ವೀರಾಜಪೇಟೆ ಕೆದಮುಳ್ಳೂರು ಗ್ರಾಮದ ನಿವಾಸಿಗಳು ಸಂಪರ್ಕ ಸಮಸ್ಯೆ ಬಗೆಹರಿಸಲು ವೀರಾಜಪೇಟೆ ಗಾಂಧಿನಗರದ ಬಿ.ಎಸ್‌ಎನ್‌ಎಲ್ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಕೆದಮುಳ್ಳೂರು ಗ್ರಾಮದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಮೇಶ್ವರ, ಗ್ರಾಮದ ಮೂರು ರಸ್ತೆ, ಕೊಟ್ಟಚ್ಚಿ ಎಂಬಲ್ಲಿ ಬಿ.ಎಸ್.ಎನ್.ಎಲ್‌ನ ಎರಡು ಟವರ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಇದರಿಂದಾಗಿ ಪರೀಕ್ಷೆ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಉಂಟಾಗಿದೆ. ಹಾಗೂ ವೀರಾಜಪೇಟೆ ನಗರಕ್ಕೆ ಆಗಮಿಸಿದರೆ ಮನೆಯವರ ಸಂಪರ್ಕ ಸಾದ್ಯವಾಗುತ್ತಿಲ್ಲ, ಆರೋಗ್ಯ ಸಮಸ್ಯೆ ಉಂಟಾದರೆ ವಾಹನಗಳ ವ್ಯವಸ್ಥೆ ಮಾಡಲು ದೂರವಾಣಿ ವ್ಯವಸ್ಥೆ ಇರುವುದಿಲ್ಲ ಇದರಿಂದಾಗಿ ಅನೇಕ ಬಾರಿ ಮನವಿ ಸಲ್ಲಿಸಿದರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದರೆ ರಾಷ್ಟçಪತಿಗಳಿಗೆ ಈ ಇಲಾಖೆಯ ವಿರುದ್ಧ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೋಟು ಬಿದ್ದಪ್ಪ ಮಾತನಾಡಿ ನಮ್ಮ ಗ್ರಾಮದಲ್ಲಿ ನಿರಂತರವಾಗಿ ದೂರವಾಣಿ ಸಮಸ್ಯೆ, ದೂರ ಸಂಪರ್ಕ ಇಲಾಖೆಯ ವತಿಯಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮಾಸಿಕವಾಗಿ ನಮ್ಮ ಮೊಬೈಲ್ ಕರೆನ್ಸಿ ಹಾಕಿದರೆ ಕನಿಷ್ಟ ಒಂದು ದಿನ ಕೂಡ ಉಪಯೋಗಿಸುವ ಸಂದರ್ಭ ಇಲ್ಲದಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪುಕಾರು ನೀಡಲಾಗುತ್ತದೆ, ಅಲ್ಲದೆ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಮುಕ್ತ ಗ್ರಾಮವಾಗಿ ಪರಿಗಣಿಸಿ ಎಂದು ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರಾಮಯ್ಯ, ಮಾಜಿ ಸದಸ್ಯ ಕಿರಣ್ ಹಾಗೂ ಗ್ರಾಮದ ಕಿಷು, ದಾದ, ಕಿಶೋರ್, ಮಂಜು, ಬಾಳಪ್ಪ, ಅಭಿ, ದಿನೇಶ್, ಶರತ್ ಸೇರಿದಂತೆ ಅನೇಕರು ಇದ್ದರು.