ಚೆಯ್ಯಂಡಾಣೆ, ಏ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರಥಮ ವರ್ಷದ ಕೋಕೇರಿ ಪ್ರೀಮಿಯರ್ ಲೀಗ್ (ಕೆಪಿಎಲ್) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ವರ್ಣರಂಜಿತ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿದ್ದ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಪ್ರಥಮವಾಗಿ ಹಾಕಿ ಪಂದ್ಯಾಟ ಕರಡ ಗ್ರಾಮದಲ್ಲಿ ಆರಂಭಗೊAಡು ಇಂದು ೨೫ನೇ ವರ್ಷದ ಮುದ್ದಂಡ ಕಪ್ ಉತ್ಸವ ನಡೆಯುತ್ತಿದೆ. ಅದೇ ರೀತಿ ಕೋಕೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಕೂಡ ಸತತವಾಗಿ ನಡೆಯಲಿ ಎಂದು ಪಂದ್ಯಾಟಕ್ಕೆ ಶುಭ ಹಾರೈಸಿದರು.

ಉದ್ಘಾಟನಾ ಪಂದ್ಯಾಟವನ್ನು ಸಮಾಜ ಸೇವಕರು ಹಾಗೂ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ ಉದ್ಘಾಟಿಸಿ ಮಾತನಾಡಿ, ಮೊದಲ ವರ್ಷದ ಕೋಕೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಆರಂಭಗೊAಡಿದ್ದು ಸಂತೋಷವಾಗಿದೆ. ಈ ಪಂದ್ಯಾಟ ಎಲ್ಲಾ ವರ್ಷ ಇದೇ ರೀತಿ ಮುಂದುವರಿಯಲಿ ಎಂದರು.

ಇದೆ ಸಂದರ್ಭ ಕೋಕೇರಿಯಲ್ಲಿ ಇಂದು ನಿಧನರಾದ ಕುಮ್ಮಂಡ ಜಾಲಿ ಜೋಯಪ್ಪನವರ ಪತ್ನಿ ಭವಾನಿಯವರನ್ನು ಸ್ಮರಿಸಿ ಮೌನಾಚರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಸದಸ್ಯೆ ಬಿ.ಎಸ್. ಪುಷ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಆರ್. ಪ್ರೇಮಾ ಕುಮಾರಿ, ಕೋಕೇರಿ ಪ್ರೀಮಿಯರ್ ಲೀಗ್ (ಕೆಪಿಎಲ್) ಅಧ್ಯಕ್ಷ ಚೇನಂಡ ರೋಷನ್ ಚಂಗಪ್ಪ, ಉಪಾಧ್ಯಕ್ಷ ಪೆಮ್ಮಂಡ ನಾಚಪ್ಪ, ಕೋಶಾಧಿಕಾರಿ ದಕ್ಷತ್ ಸುಬ್ಬಯ್ಯ, ಪೊನ್ನಚಂಡ ಕಾಳಪ್ಪ, ಕೆಪಿಎಲ್ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.

ಲೀಗ್ ಪಂದ್ಯಾಟದಲ್ಲಿ ೮ ತಂಡಗಳಾದ ನೀಲಿಯಾಟ್ ಕೋಕೇರಿ, ಟೀಮ್ ಹಂಟರ್ಸ್, ತಪ್ಸಿ ಕ್ರಿಕೆಟರ್ಸ್, ಹರಿಕಾ ಕ್ರಿಕೆಟರ್ಸ್, ಕೋಕೇರಿ ಕ್ರಿಕೆಟ್ ಕ್ಲಬ್, ಚೆಯ್ಯಂಡಾಣೆ ಸೂಪರ್ ಕಿಂಗ್ಸ್, ಪವರ್ ಹಿಟ್ಟರ್ಸ್, ಟೈಟಾನ್ಸ್ ಕೆದಮುಳ್ಳೂರು ತಂಡಗಳು ಸೆಣಸಾಡಲಿದೆ. ತಾ. ೬ ರಂದು ಫೈನಲ್ ಪಂದ್ಯಾಟ ನಡೆಯಲಿದೆ.