(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಏ. ೬: ಹುದಿಕೇರಿ ಸಣ್ಣ ಪಟ್ಟಣವಾದರೂ ಇಲ್ಲಿ ಜರುಗುವ ಕ್ರೀಡಾಕೂಟಗಳು ವಿಶೇಷವಾಗಿರುತ್ತವೆ. ಈ ಹಿಂದೆ ಹುದಿಕೇರಿಯಲ್ಲಿ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಸಿ ಯಶಸ್ಸು ಕಂಡಿದ್ದ ಚೆಕ್ಕೇರ ಕುಟುಂಬಸ್ಥರು ಈ ಬಾರಿ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯನ್ನು ಆಯೋಜಿಸಿದ್ದಾರೆ. ಕೊಡವ ಕ್ರಿಕೆಟ್ ಅಕಾಡೆಮಿಯ ಸಹಯೋಗದಲ್ಲಿ ಈ ಉತ್ಸವ ಜರುಗುತ್ತಿದ್ದು, ಭಾನುವಾರ ಸಂಭ್ರಮದ ಚಾಲನೆ ನೀಡಲಾಯಿತು. ಇದು ೨೩ನೆಯ ವರ್ಷದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯಾಗಿದೆ.
ಚೆಕ್ಕೇರ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗ ದೊಂದಿಗೆ ೨೩ ನೇ ವರ್ಷದ ಪ್ರತಿಷ್ಠಿತ ಚೆಕ್ಕೇರ ಕ್ರಿಕೆಟ್ ನಮ್ಮೆ -೨೦೨೫ ಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಬೆಳಿಗ್ಗೆ ೯ ಗಂಟೆಗೆ ಸ್ಥಳೀಯ ಮಹಾದೇವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಚೆಕ್ಕೇರ ಕುಟುಂಬಸ್ಥರು ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ಮೈದಾನ ಪ್ರವೇಶ ಮಾಡಿದರು.
ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ ಪುರುಷರು ಹಾಗೂ ಮಹಿಳೆಯರು ಕೊಡವ ವಾಲಗದೊಂದಿಗೆ ಹೆಜ್ಜೆಹಾಕುತ್ತಾ ಸ್ಥಳೀಯ ಪ್ರೌಢಶಾಲಾ ಮೈದಾನಕ್ಕೆ ಆಗಮಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜ್ಯೋತಿ ಬೆಳಗಿಸಿ ಕ್ರಿಕೆಟ್ ನಮ್ಮೆಗೆ ಚಾಲನೆ ನೀಡಿದರು.
ಮೆರವಣಿಗೆ ಮೈದಾನ ಪ್ರವೇಶ ಮಾಡಿದ
(ಮೊದಲ ಪುಟದಿಂದ) ತರುವಾಯ ಚೆಕ್ಕೇರ ಕುಟುಂಬಸ್ಥರ ಹಾಗೂ ಕ್ರಿಕೆಟ್ ಅಕಾಡೆಮಿ ಧ್ವಜವನ್ನು ಗಣ್ಯರು ಹಾರಿಸಿದರು. ನಂತರ ಸಾಂಪ್ರದಾಯಿಕವಾಗಿ ಕುಶಲ ತೋಪುಗಳನ್ನು ಹಾರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್ ವಹಿಸಿ ಮಾತನಾಡಿ, ಎಂಟು ಬಾರಿ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದೇವೆ. ಹಾಕಿ ನಮ್ಮೆ ನಡೆಸಿ ಯಶಸ್ವಿಯಾಗಿದ್ದೆವು ಆ ಧೈರ್ಯದಿಂದ ಕ್ರಿಕೆಟ್ ನಮ್ಮೆಗೆ ಯೋಜನೆ ರೂಪಿಸಲಾಯಿತು. ಅಂಜಿಕೇರಿಯವರು ಇದಕ್ಕೆ ಬೆಂಬಲವಾಗಿ ನಿಂತರು. ಕ್ರೀಡಾ ಮೈದಾನವನ್ನು ವ್ಯವಸ್ಥಿತವಾಗಿ ರೂಪಿಸಲು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅತಿ ಹೆಚ್ಚು ಅನುದಾನ ನೀಡುವ ಮೂಲಕ ಸಹಕಾರ ಮಾಡಿದರು. ಕುಟುಂಬಸ್ಥರ ಅಪಾರ ಸಹಕಾರ ಕ್ರಿಕೆಟ್ ಆಯೋಜನೆಗೆ ಸಹಕಾರಿಯಾಯಿತು. ಕಲೆ, ಸಂಸ್ಕೃತಿಗೆ ಒತ್ತುನೀಡುವ ಮೂಲಕ ಕ್ರಿಕೆಟ್ ನಮ್ಮೆ ಆಯೋಜನೆ ಮಾಡಿದ್ದೇವೆ. ದಾಖಲೆಯ ೨೮೧ ತಂಡಗಳು ಹಾಗೂ ೬೪ ಮಹಿಳಾ ತಂಡಗಳು ನೊಂದಾವಣೆ ಮಾಡಿಕೊಂಡಿದೆ. ೪೨ ದಿನಗಳ ಕಾಲ ಈ ಪಂದ್ಯಾವಳಿ ನಡೆಯಲಿದೆ ಎಂದರು. ಈ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು.
ಕ್ರೀಡೆಗೆ ಕೊಡವರ ಕೊಡುಗೆ
ಕಾರ್ಯಕ್ರಮ ಉದ್ಘಾಟಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ಪೊನ್ನಣ್ಣ ಮಾತನಾಡಿ, ಸಂಪ್ರದಾಯದ ಭಾಗವಾಗಿ ಹಾಕಿ, ಕ್ರಿಕೆಟ್ ಮತ್ತು ಇತರೆ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ.ಕೊಡವ ಜನಾಂಗ ಬಿಟ್ಟು ಇತಿಹಾಸ ಬರೆಯಲು ಸಾಧ್ಯವಿಲ್ಲ. ಕ್ರೀಡೆಗೆ ಕೊಡವರ ಕೊಡುಗೆ ಅಪಾರ ಇದೆ ಎಂದರು.
ಮೈದಾನದ ಅಭಿವೃದ್ಧಿಗೆ ಒತ್ತುನೀಡುವ ಮೂಲಕ ೨೫ ಲಕ್ಷ ಅನುದಾನ ನೀಡಲಾಗಿದೆ. ಇದರಿಂದ ಕ್ರೀಡೆಗೆ ಪ್ರೋತ್ಸಾಹ ದೊರಕಲಿದೆ. ಮಕ್ಕಳಿಗೆ ಪ್ರೊತ್ಸಾಹ ಸಿಗುವಂತಾಗಬೇಕು, ಸಮಾಜಕ್ಕೆ ಚೆಕ್ಕೇರ ಕುಟುಂಬಸ್ಥರ ಕೊಡುಗೆ ಅಪಾರವಾಗಿದೆ ಎಂದ ಅವರು ಚೆಕ್ಕೇರ ಮೋಟಯ್ಯನವರು ನ್ಯಾಯಂಗ ವ್ಯವಸ್ಥೆಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದರು. ಪ್ರತಿ ಕೊಡವ ಹಾಗೂ ಜಮ್ಮಾ ಹಿಡುವಳಿದಾರರು ಮರೆಯಲಾಗದ ವಿಷಯವೆಂದರೆ ಚೆಕ್ಕೇರ ಪೂವಯ್ಯ ವಿಚಾರದಲ್ಲಿನ ಜಮ್ಮಾ ಕುರಿತ ತೀರ್ಪು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಇಲ್ಲದಿದ್ದರೆ ಒಂದಿAಚು ಜಾಗ ಕೂಡಾ ನಮಗೆ ಸಿಗುತ್ತಿರಲಿಲ್ಲ. ಅಂತಹ ಕೊಡುಗೆ ನೀಡಿದ ಮಹನೀಯರು ಚೆಕ್ಕೇರ ಕುಟುಂಬಸ್ಥರಲ್ಲಿ ಇದ್ದರು ಎಂದರು ಅವರ ಸೇವೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟಿಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆಯನ್ನು ಆಯೋಜನೆ ಮಾಡುವ ಮೂಲಕ ಚೆಕ್ಕೇರ ಕುಟುಂಬ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ. ಸೇನೆ ಹಾಗೂ ಕ್ರೀಡೆಯಲ್ಲಿ ಕೊಡಗಿಗೆ ವಿಶೇಷ ಗೌರವವಿದೆ. ಇದರಿಂದಾಗಿ ಮತ್ತಷ್ಟು ಪ್ರತಿಭೆಗಳು ಹೊರ ಹೊಮ್ಮಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸ್ನ್ ಕಾರ್ಯಪ್ಪ ಕ್ರಿಕೆಟ್ ಅಕಾಡೆಮಿಯ ಕಾರ್ಯದರ್ಶಿ ಚೇರಂಡ ಕಿಶನ್, ಒಲಂಪಿಯನ್ ಬಾಳೆಯಡ ಸುಬ್ರಹ್ಮಣಿ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಹುದಿಕೇರಿ ಗ್ರಾ.ಪಂ.ಅಧ್ಯಕ್ಷರಾದ ಕುಪ್ಪಣಮಾಡ ನವ್ಯ ಕಾವೇರಮ್ಮ ಜನತಾ ಪ್ರೌಢಶಾಲಾ ಅಧ್ಯಕ್ಷರಾದ ಮಂಡAಗಡ ಅಶೋಕ್ ಸೇರಿದಂತೆ ಇನ್ನಿತರ ಗಣ್ಯರು ಮಾತನಾಡಿದರು.
ಚೆಕ್ಕೇರ ಬಿ.ಮೊಣ್ಣಯ್ಯ ಅವರ ಜೀವನ ಚರಿತ್ರೆ ಬಗ್ಗೆ ಬರೆದ ಪುಸ್ತಕವನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ಚೆಕ್ಕೇರ ಕುಟುಂಬದ ಹಿರಿಯರಾದ ಚೆಕ್ಕೇರ ವಾಸು ಕುಟ್ಟಪ್ಪ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಚೆಕ್ಕೇರ ಚಂದ್ರಪ್ರಕಾಶ್ ಸ್ವಾಗತಿಸಿ, ನಾಡ್ ತಕ್ಕರಾದ ಚೆಕ್ಕೇರ ರಾಜೇಶ್ ವಂದಿಸಿ, ನೆರ್ಪಂಡ ಹರ್ಷ ಹಾಗೂ ಚೋಕಿರ ಅನಿತಾ ನಿರೂಪಿಸಿದರು. ಲಾಂಛನ ಪ್ರಾರ್ಥನೆ ಸಲ್ಲಿಸಿದರು. ಅಪರಾಹ್ನದ ನಂತರ ಕೊಡವ ಹಾಗೂ ಅಮ್ಮಕೊಡವ ಕುಟುಂಬಗಳ ನಡುವೆ ಉದ್ಘಾಟನಾ ಪಂದ್ಯಾವಳಿ ಜರುಗಿತು.
ಚೆಕ್ಕೇರ ಕುಟುಂಬದ ಕ್ರಿಕೆಟ್ ಬಗ್ಗೆ ಕಬ್ಬಚ್ಚೀರ ರಶ್ಮಿ ಹಾಗೂ ಬಿದ್ದಂಡ ನಾಣಯ್ಯ, ಖ್ಯಾತ ಗಾಯಕ ಚೆಕ್ಕೇರ ಪಂಚಮ್ ಹಾಗೂ ಮುಕ್ಕಾಟಿರ ಮೌನಿ ನಾಣಯ್ಯ ಕ್ರಿಕೆಟ್ ಬಗ್ಗೆ ರಚಿಸಿದ ಗೀತೆಯನ್ನು ಪ್ರಸ್ತುತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಪಾಲ್ಗೊಂಡಿದ್ದರು. ನಾಡ್ ತಕ್ಕರು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಪ್ರದರ್ಶನ ಪಂದ್ಯದ ಫಲಿತಾಂಶ
ಚೆಕ್ಕೇರ ಕ್ರಿಕೆಟ್ ನಮ್ಮೆ ಉದ್ಘಾಟನೆ ಪ್ರಯುಕ್ತ ನಡೆದ ಪ್ರದರ್ಶನ ಪಂದ್ಯದಲ್ಲಿ ಕೊಡವ ಇಲೆವೆನ್ ತಂಡವು ಅಮ್ಮಕೊಡವ ಇಲೆವೆನ್ ತಂಡವನ್ನು ೬೭ ರನ್ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿ ಕೊಡವ ಇಲೆವೆನ್ ೬ ಓವರ್ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೧೦೭ ರನ್ ದಾಖಲಿಸಿತು. ಅಮ್ಮ ಕೊಡವ ಇಲೆವೆನ್ ೭ ವಿಕೆಟ್ ಕಳೆದುಕೊಂಡು ೪೦ ರನ್ಗಳಷ್ಟೇ ದಾಖಲಿಸಿತು.
ಎರಡು ತಂಡಗಳ ಶುಭಾರಂಭ
ಅಧಿಕೃತವಾಗಿ ಆರಂಭಗೊAಡ ಪಂದ್ಯದಲ್ಲಿ ಕೋಟ್ರಂಗಡ ತಂಡವು ಬೇರೇರ ವಿರುದ್ದ ೧೦ ವಿಕೆಟ್ಗಳಿಂದ ಗೆಲುವು ಪಡೆಯಿತು. ಬೇರೇರ ೪ ವಿಕೆಟ್ ನಷ್ಟಕ್ಕೆ ೫೨ ರನ್ ದಾಖಲಿಸಿತು. ಕೋಟ್ರಂಗಡ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.
ತೀತೀರ (ಹರಿಹರ) ತಂಡಕ್ಕೆ ಅಮ್ಮಣಕುಟ್ಟಂಡ ತಂಡದ ವಿರುದ್ಧ ೨೪ ರನ್ಗಳಿಂದ ಗೆಲುವು ಪಡೆಯಿತು. ತೀತೀರ ವಿಕೆಟ್ ಕಳೆದುಕೊಳ್ಳದೆ ೮೦ ರನ್ ದಾಖಲಿಸಿತು. ಅಮ್ಮಣಕುಟ್ಟಂಡ ೪ ವಿಕೆಟ್ ಕಳೆದುಕೊಂಡು ೫೬ ರನ್ ಗಳಿಸಿತು. ಬೇರೇರ ಪ್ರಣಯ್ ಮಾಚಯ್ಯ, ಅಮ್ಮಣಕುಟ್ಟಂಡ ಜೀತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.