ಮಡಿಕೇರಿ, ಏ. ೬: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ರಾಜ್ಯವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯು ಘಟನೆ ಖಂಡಿಸಿ ಜಿಲ್ಲೆಯ ಇಬ್ಬರು ಶಾಸಕರು ಹಾಗೂ ಕಾಂಗ್ರೆಸ್ ವಿರುದ್ಧ ಹೋರಾಟವನ್ನು ಕೈಗೆತ್ತಿಗೊಂಡಿದೆ. ಬಿಜೆಪಿಯ ವಿರುದ್ಧ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಭಾನು ವಾರ ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕೃತಿ ದಹನ ಮಾಡಿದ್ದಲ್ಲದೆ ಬಿಜೆಪಿ ನಾಯಕರ ವಿರುದ್ಧ ಕೈ ನಾಯಕರು ವಾಕ್ಸಮರವನ್ನು ನಡೆಸಿದರು.
ಜಿಲ್ಲೆಯ ಶಾಸಕರಾದ ಎ.ಎಸ್. ಪೊನ್ನಣ್ಣ
(ಮೊದಲ ಪುಟದಿಂದ) ಹಾಗೂ ಡಾ. ಮಂತರ್ ಗೌಡ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಸುಳ್ಳು ಆರೋಪವನ್ನು ಬಿಜೆಪಿ ಮಾಡುತ್ತಾ ಶವದ ಮೇಲೆ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ಮಾಡಿದರು.
ಗಾಂಧಿ ಮೈದಾನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾಲ್ನಡಿಗೆಯಲ್ಲಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜ. ತಿಮ್ಮಯ್ಯ ವೃತ್ತದ ತನಕ ಮೆರವಣಿಗೆ ಸಾಗಿದರು. ತಿಮ್ಮಯ್ಯ ವೃತ್ತದಲ್ಲಿ ಪ್ರತಾಪ್ ಸಿಂಹ ಪ್ರತಿಕೃತಿಗೆ ಚಪ್ಪಲಿ ಹಾಗೂ ಮದ್ಯದ ಪ್ಯಾಕೆಟ್ ಹಾರವನ್ನು ಹಾಕಿ ಪೆಟ್ರೋಲ್ ಹಾಕಿ ಸುಟ್ಟು ಆಕ್ರೋಶ ಹೊರಹಾಕಿದರು. ಆನಂತರ ಮರಳಿ ಗಾಂಧಿ ಮೈದಾನಕ್ಕೆ ಆಗಮಿಸಿ ಪ್ರತಿಭಟನಾ ಸಭೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿನಯ್ ಕುಟುಂಬದ ಜೊತೆ ನಿಲ್ಲುತ್ತೇವೆ - ಪೊನ್ನಣ್ಣ
ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಪಾಲ್ಗೊಂಡು ಮಾತನಾಡಿ, ಬಿಜೆಪಿ ಕೀಳು ಮಟ್ಟದ ರಾಜಕಾರಣಕ್ಕಿಳಿದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಾದ ಸೋಲಿನ ನಿರಾಸೆಯಿಂದ ವಿನಯ್ ಸೋಮಯ್ಯ ಆತ್ಮಹತ್ಯೆಯನ್ನು ತಿರುಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರಕಾರ ವಿನಯ್ ಕುಟುಂಬದ ಜೊತೆ ನಿಲ್ಲುತ್ತದೆ. ಇದು ನಮ್ಮ ಸಂಸ್ಕೃತಿಯಾಗಿದ್ದು, ಜಿಲ್ಲೆಯ ವಾತಾವರಣವನ್ನು ಬಿಜೆಪಿ ಹದಗೆಡಿಸುತ್ತಿದೆ. ಜನರ ಹಿತ ಕಾಪಾಡುವ ಕಾಳಜಿಯಿಂದ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದರು.
ಸಾವಿಗೆ ಬಿಜೆಪಿ ಕಾರಣ
ವಿನಯ್ ಸಾವಿನ ನಂತರ ಬೆಂಗಳೂರಿನಿAದ ಬಂದ ನಾಯಕರು ಶವಸಂಸ್ಕಾರಕ್ಕೆ ಬಿಡುವುದಿಲ್ಲ ಎಂದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ?. ಇವರಿಗೆ ಮಾನವೀಯತೆ ಇದೆಯೇ? ಎಂದು ಪ್ರಶ್ನಿಸಿದ ಪೊನ್ನಣ್ಣ ಅವರು, ವಿನಯ್ ಸೋಮಯ್ಯ ಸಾವಿಗೆ ಬಿಜೆಪಿ ನಾಯಕರಿಗೆ ಶೋಕವಿಲ್ಲ. ಇದನ್ನು ಅವಕಾಶವಾಗಿ ಬಳಸಿಕೊಂಡು ರಾಜಕಾರಣದಲ್ಲಿ ತಲ್ಲೀನವಾಗಿದೆ. ಈ ಸಾವಿಗೆ ಬಿಜೆಪಿ ಕಾರಣವಾಗಿದೆ. ರಾಜಕೀಯಕ್ಕಾಗಿ ಬಲಿ ಕೊಟ್ಟಿದ್ದಾರಾ? ಎಂಬ ಕೋನದಲ್ಲೂ ತನಿಖೆಯಾಗಲಿ. ಬಿಜೆಪಿ ಐಟಿ ಸೆಲ್ ಸುಳ್ಳು ಸುದ್ದಿಗಳು ಸೃಷ್ಟಿಯಾಗುವ ಜಾಗವಾಗಿದೆ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ವಿನಯ್ ಮೃತದೇಹ ತೆಗೆಯಲು ಬಿಡದೆ ನಾಟಕ ಮಾಡಿದವರೂ ಮೃತದೇಹ ಕೊಡಗಿಗೆ ಬರುವಾಗ ಒಬ್ಬರೂ ಜೊತೆಯಿರಲಿಲ್ಲ. ಬಿಜೆಪಿ ಪ್ರತಿಭಟನೆಯಲ್ಲಿ ಕೇವಲ ೨೦೦ ಜನ ಇದ್ದರು. ಸುಳ್ಳಿನ ರಾಜಕಾರಣವನ್ನು ಬಿಜೆಪಿ ನಾಯಕರೇ ಒಪ್ಪುವುದಿಲ್ಲ. ದ್ವೇಷದ ರಾಜಕಾರಣದ ಬಗ್ಗೆ ಅವರಿಗೂ ತಿಳಿದಿದೆ. ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ೨೦ ಜನ ಪೈಕಿ ೧೫ ಮಂದಿ ಮೇಲೆ ಕ್ರಿಮಿನಲ್ ಪ್ರಕರಣವಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಹೆದರಿ ತನಿಖೆ ಕೈಬಿಡುತ್ತೇವೆ ಎಂದುಕೊAಡಿದ್ದಾರೆ. ಯಾವುದೇ ಕಾರಣಕ್ಕೂ ತನಿಖೆ ಕೈಬಿಡುವುದಿಲ್ಲ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ. ಪ್ರತಿಭಟನಾಕಾರರ ರೂಪದಲ್ಲಿ ಬಂದವರು ಜನಸಾಮಾನ್ಯರನ್ನು ತಡೆದು ಹಲ್ಲೆ ಮಾಡಿದ್ದಾರೆ. ಅಂತವರನ್ನು ಬಂಧಿಸಬೇಕು ಎಂದು ಎ.ಎಸ್. ಪೊನ್ನಣ್ಣ ಒತ್ತಾಯಿಸಿದರು.
ಬಿಜೆಪಿಯಿಂದ ರಾಜಕೀಯ ಷಡ್ಯಂತ್ರ - ಲಕ್ಷö್ಮಣ್
ಪ್ರತಾಪ್ ಸಿಂಹ ವರ್ತನೆಯಿಂದ ಬಿಜೆಪಿಯೇ ಅವರನ್ನು ಹೊರಹಾಕಿದೆ. ದಿಕ್ಕುತಪ್ಪಿಸಿ ಘರ್ಷಣೆ ಸೃಷ್ಟಿಸುವುದು ಅವರ ಛಾಳಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಕಷ್ಟಪಟ್ಟು ಅಧಿಕಾರಕ್ಕೆ ತಂದಿದ್ದೇವೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ತಲುಪುತ್ತಿದೆ. ಇದನ್ನು ಸಹಿಸಲಾಗದೆ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಆರ್. ಅಶೋಕ್, ನಾರಾಯಣ ಸ್ವಾಮಿ ದೊಡ್ಡ ‘ಜೋಕರ್ಸ್’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್ ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಕೊಡಗು ಪೊಲೀಸರನ್ನು ಅವಹೇಳನ ಮಾಡಿ ಕೆಟ್ಟ ಹೆಸರು ತರುವ ಕೆಲಸ ಬಿಜೆಪಿ ಮಾಡುತ್ತಿದೆ. ತನಿಖೆ ಬಳಿಕ ಸತ್ಯಾಂಶ ಹೊರಬಂದ ನಂತರ ಬಿಜೆಪಿಗೆ ತಿಳಿಯುತ್ತದೆ ಎಂದರು.
ತಪ್ಪಿದ್ದರೆ ಚಾರ್ಜ್ಶೀಟ್‌ನಲ್ಲಿ ಹೆಸರು ಸೇರುತ್ತದೆ - ಚಂದ್ರಮೌಳಿ
ಪಕ್ಷದ ಹಿರಿಯ ಮುಖಂಡ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಎಫ್.ಐ.ಆರ್.ನಲ್ಲಿ ಶಾಸಕರ ಹೆಸರು ಸೇರಿಸಬೇಕು ಎಂದು ಒತ್ತಾಯಿಸುವವರಿಗೆ ಕಾನೂನು ಜ್ಞಾನ ಇಲ್ಲ. ತನಿಖೆಯಲ್ಲಿ ತಪ್ಪಿರುವುದು ಕಂಡುಬAದಲ್ಲಿ ಚಾರ್ಜ್ಶೀಟ್‌ನಲ್ಲಿ ಪೊಲೀಸರು ಹೆಸರು ಸೇರಿಸುತ್ತಾರೆ. ವಾಟ್ಸಾö್ಯಪ್ ಮೆಸೇಜ್ ಅವರೇ ಕಳಿಸಿದ್ದರೋ, ಎನ್ನುವುದರ ಬಗ್ಗೆ ತನಿಖೆ ನಂತರ ತಿಳಿಯುತ್ತದೆ. ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಜಾರ್ಜ್ ನಿರ್ದೋಷಿ ಎಂದು ಸಾಬೀತಾಯಿತು. ಈ ಪ್ರಕರಣದಲ್ಲೂ ತನಿಖೆಗೆ ಯಾರು ಅಡ್ಡಿಪಡಿಸುತ್ತಿಲ್ಲ ಎಂದ ಅವರು, ವಿನಯ್ ಕುಟುಂಬದ ನೋವು ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಮಾಡೋಣ. ರಾಜಕೀಯ ಬಿಟ್ಟು ಕುಟುಂಬಕ್ಕೆ ನೆಲೆ ನೀಡೋಣ ಎಂದು ಕರೆ ನೀಡಿದರು.
ಸಿಐಡಿ ತನಿಖೆಯಾಗಲಿ - ಅರುಣ್ ಮಾಚಯ್ಯ
ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಬಿಜೆಪಿ ಸಾವಿನ ವ್ಯಾಪಾರ ಮಾಡುತ್ತಿದೆ. ಅಭಿವೃದ್ಧಿಗೆ ಸ್ಪಂದಿಸದೇ ಶಾಸಕರನ್ನು ಚಿವುಟುವ ಕೆಲಸ ನಡೆಸುತ್ತಿದೆ. ಇದರ ಹಿಂದೆ ಪ್ರಬಲ ಕಾರಣವಿದೆ. ವಿನಯ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದರು.
ಸಮಾಧಿ ಮೇಲೆ ಅಧಿಕಾರದ ಬುನಾದಿ - ಶಶಿಧರ್
ಬಿಜೆಪಿ; ವಿನಯ್ ಸಮಾಧಿ ಮೇಲೆ ಅಧಿಕಾರದ ಬುನಾದಿ ನೆಡಲು ಪ್ರಯತ್ನಿಸುತ್ತಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ವಾಗ್ದಾಳಿ ನಡೆಸಿದರು.
ಬಿಜೆಪಿ ದ್ವೇಷ, ಪ್ರತೀಕಾರದ ಗುಣವನ್ನು ತನ್ನ ಕಾರ್ಯಕರ್ತರಲ್ಲಿ ತುಂಬುತ್ತದೆ. ಪೊನ್ನಣ್ಣ ಅವರು ಶ್ರೀಮಂತಿಕೆಯಲ್ಲಿ ಬೆಳೆದವರಾಗಿದ್ದಾರೆ. ಅವರ ಜೀವನಶೈಲಿ, ಧರಿಸುವ ಬಟ್ಟೆಗಳ ಬಗ್ಗೆ ಟೀಕಿಸುವ ನೈತಿಕತೆ ಯಾರಿಗೂ ಇಲ್ಲ. ಪ್ರತಾಪ್ ಸಿಂಹ ಅವರು ಸದಾ ‘ಹ್ಯಾಂಗ್ ಓವರ್’ನಲ್ಲಿರುತ್ತಾರೆ. ಈ ಹಿಂದೆ ಸಂಸದರಾಗಿದ್ದಾಗ ಮಾಜಿ ಶಾಸಕರ ಅನುಮತಿ ಪಡೆದು ಜಿಲ್ಲೆಗೆ ಬರಬೇಕಾಗಿತ್ತು ಎಂದು ಕುಟುಕಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಬಿಜೆಪಿ ನಾಯಕರು ಸುಳ್ಳಿನ ಸರದಾರರು. ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ನಡೆದಿರುವುದು ಇತಿಹಾಸ. ಸುಳ್ಳುಹೇಳುವ ಬಿಜೆಪಿಯನ್ನು ನೋಡಿ ನಾವು ಕೈಕಟ್ಟಿ ಕುಳಿತಿಲ್ಲ. ಸೆಟೆದು ನಿಂತು ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಮಾತನಾಡಿ, ಬಿಜೆಪಿ ಇದೇ ರೀತಿ ಸುಳ್ಳು ಪ್ರಚಾರ ನಡೆಸಿದರೆ ತಾಲೂಕು ಕೇಂದ್ರಗಳಲ್ಲಿಯೂ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಸೇರಿದಂತೆ ಇನ್ನಿತರರು ಹಾಜರಿದ್ದರು.