ಗೋಣಿಕೊಪ್ಪಲು, ಏ. ೨ : ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಕಾರ್ಯಕ್ರಮಗಳು ಆಯೋಜನೆಗೊಂಡ ಸಂದರ್ಭದಲ್ಲಿ ನಿಯಮಾನುಸಾರವಾಗಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೆತರುವುದು ವಾಡಿಕೆಯಾಗಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸ್ಥಳೀಯ ಮಟ್ಟದಲ್ಲಿ ನಡೆದ ಶಾಸಕರ ಭೂಮಿಪೂಜೆ ನೆರವೇರಿಸಿದ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹಾಗೂ ಆಡಳಿತ ಮಂಡಳಿಯನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಆರೋಪಿಸಿದೆ.
ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಚೆಕ್ಕೆರ ಸೂರ್ಯ ಅಯ್ಯಪ್ಪ ಪ್ರತಿಕ್ರಿಯಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಶಾಸಕ ಎ.ಎಸ್. ಪೊನ್ನಣ್ಣ ಮುಂದಾಳತ್ವದಲ್ಲಿ ಅಧಿಕಾರಿಗಳು ಚೆಕ್‌ಡ್ಯಾಮ್ ನಿರ್ಮಿಸಲು ಭೂಮಿ ಪೂಜೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಆಹ್ವಾನಿಸುವಲ್ಲಿ ಇಲಾಖೆಯ ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನವನ್ನು ತೋರಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿಯ ಅಧ್ಯಕ್ಷರಿಗೂ ಹಾಗೂ ಆಡಳಿತ ಮಂಡಳಿಗೆ ಬೇಸರತಂದಿದೆ.
ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಶಾಸಕರು ಆಗಮಿಸುವ ಸಂದರ್ಭ ಪಂಚಾಯಿತಿಯ ಗಮನಕ್ಕೆ ತಂದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಶಾಸಕರ ಮುಂದೆ ತೋಡಿಕೊಳ್ಳಲು ಅವಕಾಶವಾಗುತ್ತದೆ.ಆದರೆ ಇಲಾಖಾಧಿಕಾರಿಗಳು ಮಾಡಿರುವ ಪ್ರಮಾದದಿಂದ ಗ್ರಾಮಕ್ಕೆ ಆಗಮಿಸಿದ್ದ ಶಾಸಕರನ್ನು ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಗೌರವಯುತವಾಗಿ ಸ್ವಾಗತಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ನಮ್ಮ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಚೆಕ್‌ಡ್ಯಾಮ್ ನಿರ್ಮಾಣದ ಕುರಿತು ಈ ಹಿಂದೆ ಶಾಸಕ ಪೊನ್ನಣ್ಣ ಅವರ ಗಮನ ಸೆಳೆಯಲಾಗಿತ್ತು. ಶಾಸಕರು ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತವಾದ ಸ್ಥಳದಲ್ಲಿ ಚೆಕ್‌ಡ್ಯಾಮ್ ಮಾಡಿಕೊಡುವ ಭರವಸೆ ನೀಡಿದ್ದರು. ಇದರಿಂದ ನೀಡಿದ ಭರವಸೆಯೂ ಈಡೇರಿದಂತಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಕಾರ್ಯಕ್ರಮಕ್ಕೆ ಆಹ್ವಾನ ದೊರೆತಿಲ್ಲ. ಈ ಬಗ್ಗೆ ಶಾಸಕ ಪೊನ್ನಣ್ಣನವರು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಇಂತಹಪ್ರಮಾದ ಮರುಕಳಿಸದಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಸ್ಥಳೀಯ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಪ್ರತಿಕ್ರಿಯಿಸಿ ಕ್ಷೇತ್ರದ ಶಾಸಕರು ಉತ್ತಮ ರೀತಿಯಲ್ಲಿ ಜನತೆಗೆ ಸ್ಪಂದನ ನೀಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದಾರೆ. ಶಾಸಕರ ಕಾರ್ಯಕ್ರಮ ಇದ್ದಲ್ಲಿ ಅಧಿಕಾರಿಗಳು ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಇದರಿಂದ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಶಾಸಕರ ಮುಂದೆ ಸ್ಥಳೀಯವಾಗಿ ಹಂಚಿಕೊಳ್ಳಲು ಅವಕಾಶವಾಗುತ್ತದೆ. ಅಧಿಕಾರಿಗಳು ಮಾಡಿದ ನಿರ್ಲಕ್ಷಕ್ಕೆ ಶಾಸಕರು ಕ್ರಮ ಕೈಗೊಳ್ಳಬೇಕು. ಇದರಿಂದ ಮುಂದಿನ ದಿನದಲ್ಲಿ ಇಂತಹ ತಪ್ಪುಗಳು ಮುಂದುವರೆಯುವುದು ತಪ್ಪಲಿದೆ ಎಂದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮ್ಮುಣಿ ಪಿ.ಆರ್., ಉಪಾಧ್ಯಕ್ಷೆ ಕಾಟೀಮಾಡ ಶರೀನ್ ಮುತ್ತಣ್ಣ, ಸದಸ್ಯರಾದ ಅಮ್ಮಯ್ಯ, ಪಡಿಞರಂಡ ಕವಿತ ಪ್ರಭು, ಸುಮತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.