ಪಾಲಿಬೆಟ್ಟ, ಏ. ೨: ಬೇಸಿಗೆಯಲ್ಲಿ ನೀರಿಗಾಗಿ ಬಳಲುತ್ತಿರುವ ಪಕ್ಷಿಗಳಿಗೆ ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯಲ್ಲಿ ವಿಶೇಷಚೇತನ ವಿದ್ಯಾರ್ಥಿಗಳು ನೀರಿನ ಡಬ್ಬಿಗಳನ್ನು ಮರದ ಕೊಂಬೆಗಳಿಗೆ ನೇತು ಹಾಕಿ ಬಸವಳಿದ ಬಾನಾಡಿಗಳಿಗೆ ದಾಹ ನೀಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಮನುಷ್ಯರೇ ನೀರಿಗಾಗಿ ಪರದಾಡುವಂತಾಗಿದೆ, ಇನ್ನೂ ಹಕ್ಕಿಗಳ ಪಾಡು ಕೇಳುವಂತಿಲ್ಲ, ಹಕ್ಕಿಗಳಿಗೆ ನೀರಿನ ಬವಣೆ ನೀಗಿಸಲು ಮರದಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ಗೀತಾ ಚಂಗಪ್ಪ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಸ್ವಯಂಸೇವಕರಾದ ಲೀನಾ, ವೇದಿಕಾ, ಗಾಯತ್ರಿ ಹಾಗೂ ಮುಖ್ಯೋಪಾಧ್ಯಾಯ ಶಿವರಾಜ್ ಎಸ್.ಸಿ. ಮತ್ತು ಶಾಲೆಯ ಎಲ್ಲ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರೆಲ್ಲ ವಿಶೇಷಚೇತನ ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.