ಸಿದ್ದಾಪುರ, ಏ. ೨: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಳ್ಳ ಚೊಟ್ಟೆಪಾರೆಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಸಂಬAಧ ಪರ - ವಿರೋಧ ಪ್ರತಿಭಟನೆ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಲ್ಲಳ್ಳ ಚೊಟ್ಟೆಪಾರೆ ಜನವಸತಿ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕವನ್ನು ಮಾಡುವುದನ್ನು ವಿರೋಧಿಸಿ ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಕಳೆದ ೧೦ ದಿನಗಳಿಂದ ಪ್ರತಿಭಟನೆ ನಡೆಯುತ್ತಿತ್ತು.
ಅದೇ ಜಾಗಕ್ಕೆ ಒತ್ತಾಯಿಸಿ ಪ್ರತಿಭಟನೆ
ಖಾಸಗಿ ಸಂಸ್ಥೆಯೊAದು ಗ್ರಾಮ ಪಂಚಾಯಿತಿಗೆ ಕಸವಿಲೇವಾರಿ ಮಾಡಲು ಉದಾರವಾಗಿ ನೀಡಿರುವ ಜಾಗದಲ್ಲಿ ಕಸ ವಿಲೇವಾರಿ ಘಟಕ ವೈಜ್ಞಾನಿಕವಾಗಿ ನಿರ್ಮಿಸಿ ಕಸ ವಿಲೇವಾರಿ ಮಾಡುವಂತೆ ಹಾಗೂ ಬಿ.ಎಸ್.ಪಿ. ವಿರುದ್ಧ ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನಕೋಟೆ, ಪಾಲಿಬೆಟ್ಟ ಭಾಗದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಸೇರಿ ಪ್ರತಿಭಟನೆ ನಡೆಸಿದರು. ಮಾಲ್ದಾರೆಯ ಸರ್ಕಾರಿ ಶಾಲೆಯಿಂದ ಗ್ರಾಮಪಂಚಾಯಿತಿಯ ಕಚೇರಿ ತನಕ ಮೆರವಣಿಗೆ ಸಾಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಿಎಸ್‌ಪಿ ನಡೆಸುತ್ತಿರುವ ಹೋರಾಟವನ್ನು ಖಂಡಿಸಿದರು. ಪಂಚಾಯಿತಿ ಕಚೇರಿ ಸಮೀಪ ಪ್ರತಿಭಟನೆ ನಡೆಸಿ ಉದ್ದೇಶಿತ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಬಿ. ಗಣೇಶ್ ಮಾತನಾಡಿ, ಈಗಾಗಲೇ ಮಾಲ್ದಾರೆಯಲ್ಲಿ ಜಿಲ್ಲಾಡಳಿತ ಗುರುತಿಸಿರುವ ಜಾಗದಲ್ಲಿ ವೈಜ್ಞಾನಿಕವಾಗಿ ಘಟಕ ನಿರ್ಮಾಣ ಮಾಡುತ್ತಿರುವ ಸಂದರ್ಭದಲ್ಲಿ ಹೊರ ಊರಿನಿಂದ ಬಂದ ಕೆಲ ವ್ಯಕ್ತಿಗಳು ಪಕ್ಷವೊಂದರ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಾ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದರು.
೨೦ ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಎದುರಾಗಿದ್ದು, ದಾನಿಯೊಬ್ಬರು ನೀಡಿದ ೧ ಎಕರೆ ಜಾಗದಲ್ಲಿ ಘಟಕ ನಿರ್ಮಾಣ ಸಂದರ್ಭ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹೆಚ್.ಎಂ. ಕಾವೇರಿ ಮಾತನಾಡಿ, ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ಸಹಿಸಲಾಗದೆ ಬಿಎಸ್‌ಪಿ ಘಟಕಕ್ಕೆ ತಡೆಯೊಡ್ಡುತ್ತಿದೆ ಎಂದು ಆರೋಪಿಸಿದರು.
ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್ ಮಾತನಾಡಿ, ಬಿಎಸ್‌ಪಿ ಹೋರಾಟಕ್ಕೆ ಸಂಸದರು, ಮಾಜಿ ಶಾಸಕರು ಬೆಂಬಲ ಸೂಚಿಸಿರುವುದು ಖಂಡನೀಯ. ಈ ಹಿಂದಿನ ಶಾಸಕರು ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರಕಿಸಿಲ್ಲ. ಇದೀಗ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವುದು ಹಾಸ್ಯಾಸ್ಪದ ಎಂದರು.
ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಮಾತನಾಡಿ, ಕಸ ವಿಲೇವಾರಿ ಘಟಕ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತನ್ನನ್ನು ಸೇರಿದಂತೆ ಪಿಡಿಓ ಹಾಗೂ ಸಿಬ್ಬಂದಿಗಳ ವಿರುದ್ಧ ವೈಯಕ್ತಿಕ ನಿಂದನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭ ಮಾಲ್ದಾರೆ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಸಾಜಿ ಥೋಮಸ್, ಸÀಮೀರ್, ವೀರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಪ್ರೇಮಾಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ, ಸದಸ್ಯರುಗಳಾದ ಅಬ್ದುಲ್ ಶುಕೂರ್, ಜಾಫರ್ ಅಲಿ, ಬಬಿತ, ಪ್ರೇಮ, ಮಾಲ್ದಾರೆ ಗ್ರಾ.ಪಂ. ಸದಸ್ಯರುಗಳಾದ ಹನೀಫ, ಮಹಮ್ಮದ್ ಆಲಿ, ಪಾಲಿಬೆಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ಕಾಳಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ನಿಂದನೆ ಆರೋಪ - ಪೊಲೀಸ್ ದೂರು
ಬಿಎಸ್‌ಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಹಾಗೂ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಿ ಡಿವೈಎಸ್‌ಪಿ ಸೂರಜ್ ಅವರಿಗೆ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಲಿಖಿತ ದೂರು ನೀಡಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದರು.