ವೀರಾಜಪೇಟೆ, ಏ. ೨: ಭಾರತದ ಜಾನಪದ ಇತಿಹಾಸದಲ್ಲಿ ಪ್ರಪ್ರಥಮ ಜಾನಪದ ಆಧಾರಿತ ಸಂಗ್ರಹ ಪುಸ್ತಕ ಪಟ್ಟೋಲೆ ಪಳಮೆಯನ್ನು ಪ್ರಕಟಿಸಿದ, ಜಾನಪದ ಬ್ರಹ್ಮ ಎಂದೇ ಖ್ಯಾತರಾಗಿರುವ, ದಿ. ನಡಿಕೇರಿಯಂಡ ಚಿಣ್ಣಪ್ಪ ಅವರ ೧೫೦ನೇ ಜನ್ಮ ದಿನಾಚರಣೆಯ ಅಂಗವಾಗಿ, ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ತಾ.೪ ರಂದು (ನಾಳೆ) ಕೊಡವ ಜಾನಪದ ನಾಳ್ ಮತ್ತು ಕೊಡವಾಮೆಗಾಗಿ ಎಲೆಮರೆಯಲ್ಲಿ ದುಡಿಯುತ್ತಿರುವ ಸುಮಾರು ೨೫೦ ಜನರಿಗೆ, ದಿವಂಗತ ಮುಕ್ಕಾಟಿರ ಶಿವು ಮಾದಪ್ಪ ನೆನಪಿನಲ್ಲಿ ಸ್ಮರಣಿಕೆ ವಿತರಣಾ ಕಾರ್ಯಕ್ರಮ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು, ಕೊಡವ ಭಾಷಿಕ ಸಮಾಜ ಒಕ್ಕೂಟ ಅಧ್ಯಕ್ಷ ಮೇಚಿರ ಸುಭಾಶ್ ನಾಣಯ್ಯ, ನಡಿಕೇರಿಯಂಡ ಒಕ್ಕ ಅಧ್ಯಕ್ಷ ನಡಿಕೇರಿಯಂಡ ಕಿಶೋರ್ ತಿಮ್ಮಯ್ಯ, ಸರ್ಕಂಡ ಸೋಮಯ್ಯ ಭಾಗವಹಿಸಲಿದ್ದಾರೆ.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ ೧೫೦ನೇ ವರ್ಷಾಚರಣೆಯ ಅಂಗವಾಗಿ ನಡೆಯುವ, ರಾಜ್ಯಮಟ್ಟದ ಬೃಹತ್ ಜಾನಪದ ನಮ್ಮೆಯ ಲೋಗೋ ಅನಾವರಣ ಹಾಗೂ ಹಲವು ವರ್ಷಗಳಿಂದ ಮತ್ತು ಭವಿಷ್ಯದ ಕೊಡವಾಮೆಯ ನೆರಳುಗಳಾಗಿ ದುಡಿಯುವ, ಎಲ್ಲಾ ಕೊಡವ ಸಮಾಜ, ಸಂಘಟನೆ, ಪೊಮ್ಮಕ್ಕಡ ಕೂಟ ಮತ್ತು ವೈಯಕ್ತಿಕ ನೆಲೆಗಟ್ಟಿನಲ್ಲಿ ಸುಮಾರು ೨೫೦ ಜನರಿಗೆ ಸ್ಮರಣಿಕೆಗಳನ್ನು ನೀಡಿ ಹುರಿದುಂಬಿಸಲಾಗುವುದು. ಈ ಸ್ಮರಣಿಕೆಯನ್ನು ಇತ್ತೀಚಿಗೆ ಅಗಲಿದ ಯುವನಾಯಕ, ಮುಕ್ಕಾಟಿರ ಶಿವು ಮಾದಪ್ಪ ಅವರ ನೆನಪಿನಲ್ಲಿ, ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಪ್ರಾಯೋಜಿಸಿದ್ದಾರೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ತಿಳಿಸಿದೆ.