ಮಡಿಕೇರಿ, ಏ. ೨: ನಕಲಿ ಜಾತಿ ಪ್ರಮಾಣ ಪತ್ರ ಹೊಂದಿಕೊAಡು ನೈಜ ಗಿರಿಜನರ ಮೇಲೆ ದೌರ್ಜನ್ಯ ಎಸಗಲಾಗುತ್ತದೆ ಎಂದು ಆರೋಪಿಸಿ ಆದಿವಾಸಿ ಸಂಘಟನೆಗಳ ಒಕ್ಕೂಟದಿಂದ ತಾ. ೪ರಂದು ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪ್ರಮುಖರು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೇನುಕುರುಬರ ಅಭಿವೃದ್ಧಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಟಿ. ಕಾಳಿಂಗ, ಗಿರಿಜನರೆಂದು ಹೇಳಿಕೊಂಡು ನಕಲಿ ಜಾತಿ ಪ್ರಮಾಣ ಪತ್ರ ಹೊಂದಿಕೊಳ್ಳುತ್ತಿರುವುದರಿAದಾಗಿ ಆದಿವಾಸಿಗಳಿಗೆ ಸರ್ಕಾರದ ಸವಲತ್ತುಗಳು ತಲುಪುತ್ತಿಲ್ಲ. ವಿದ್ಯಾಭ್ಯಾಸ ಇದ್ದರೂ, ಉದ್ಯೋಗದಲ್ಲಿ ಮೀಸಲಾತಿ ಇದ್ದರೂ ಉದ್ಯೋಗ ಸಿಗದೆ ಆದಿವಾಸಿಗಳು ಕೂಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ದಸಂಸ ಭೀಮಾವಾದದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ. ರಾಜು ಮಾತನಾಡಿ, ಜಿಲ್ಲೆಯ ಅಲ್ಲಲ್ಲಿ ನಕಲಿ ಜಾತಿ ಪ್ರಮಾಣಪತ್ರ ಹೊಂದಿಕೊಳ್ಳುತ್ತಿರುವ ಘಟನೆಗಳ ಬಗ್ಗೆ ಸಂಬAಧಿಸಿದವರಿಗೆ ಮನವಿ ನೀಡಿದ್ದರೂ ಕೂಡ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದರು. ಸೋಲಿಗ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಬಿ. ಮಹೇಶ್ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರದ ಕುರಿತು ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಮನವಿ ನೀಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಆದಿವಾಸಿಗಳಿಗೆ ನ್ಯಾಯ ಒದಗಿಸಬೇಕೆಂದು ಕೋರಿದರು. ತಾ. ೪ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸುದರ್ಶನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಒಕ್ಕೂಟದ ಪ್ರಮುಖರು ತಿಳಿಸಿದರು.

ಗೋಷ್ಠಿಯಲ್ಲಿ ಸೋಲಿಗ ಅಭಿವೃದ್ಧಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸಿದ್ಧಲಿಂಗ, ದಸಂಸ ಭೀಮಾವಾದದ ಜಿಲ್ಲಾ ಸಂಚಾಲಕ ಬಿ.ಎಸ್. ರಮೇಶ್, ಮಾವಿನಹಾಡಿ ಅರಣ್ಯ ಹಕ್ಕು ಸಮಿತಿ ಕಾರ್ಯದರ್ಶಿ ಜೆ.ಎಸ್. ಪಾಪಣ್ಣ ಉಪಸ್ಥಿತರಿದ್ದರು.