ವೀರಾಜಪೇಟೆ, ಏ. ೨: ತಲಚೇರಿ-ವಳವುಪಾರ ಅಂತರರಾಜ್ಯ ಹೆದ್ದಾರಿಯ ಉಳಿಯಿಲ್ ಸೇತುವೆ ಬಳಿ ಖಾಸಗಿ ಬಸ್ ಹಾಗೂ ಸರಕು ಸಾಗಣೆ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರು ಸೇರಿದಂತೆ ೨೨ ಮಂದಿ ಗಾಯಗೊಂಡಿದ್ದಾರೆ. ಬುಧವಾರ ಬೆಳಿಗ್ಗೆ ೭.೧೫ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಣ್ಣೂರಿನಿಂದ ವೀರಾಜಪೇಟೆಗೆ ತೆರಳುತ್ತಿದ್ದ ಕ್ಲಾಸಿಕ್ ಬಸ್ ಇರಿಟಿಯಿಂದ ಮಟ್ಟನ್ನೂರಿಗೆ ತೆರಳುತ್ತಿದ್ದ ಕಾರ್ಗೋ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಹಾಗೂ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊAಡಿದೆ. ಅಪಘಾತದ ರಭಸಕ್ಕೆ ಚಾಲಕ ಬಸ್ಸಿನೊಳಗೆ ಸಿಲುಕಿದ್ದು, ಕಾಲು ಮತ್ತು ಎದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಇರಿಟ್ಟಿಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್‌ನ ಮುಂಭಾಗವನ್ನು ಒಡೆದು ಚಾಲಕನನ್ನು ಹೊರತೆಗೆದಿದ್ದಾರೆ. ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಾಚರಣೆಯ ಮೂಲಕ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಬಸ್ ಚಾಲಕ ಮಡಿಕೇರಿಯ ಯತಿನ್ (೩೨) ಸೇರಿದಂತೆ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ನಂತರ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ವಾಹನದಿಂದ ರಸ್ತೆಗೆ ಸುರಿದ ಆಯಿಲ್ ಮತ್ತು ಡೀಸೆಲ್ ಅನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ವಚ್ಛಗೊಳಿಸಿ ಸಂಚಾರವನ್ನು ಸುಸ್ಥಿತಿಗೆ ತಂದರು. ಇರಿಟ್ಟಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. -ಕಿಶೋರ್ ಕುಮಾರ್ ಶೆಟ್ಟಿ