ಮಡಿಕೇರಿ, ಮಾ. ೩೧: ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಆಟಗಾರರಿಗೆ ಪ್ರಯೋಜನಕಾರಿ ಯಾಗುವಂತೆ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ರೂ. ೧.೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಯಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ವಿಕ್ರಂದತ್ತ ಲೋಕಾರ್ಪಣೆಗೊಳಿಸಿದರು. ನಂತರ ಸಮಾರಂಭದಲ್ಲಿ ಮಾತನಾಡಿದ ವಿಕ್ರಂದತ್ತ, ಕೊಡಗು ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯು ಜನೋಪಯೋಗಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ. ರೋಟರಿ ವುಡ್ಸ್ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ ಎಂದು ಶ್ಲಾಘಿಸಿದರು.
ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ, ೧೨೦ ವರ್ಷಗಳ ಸುಧೀರ್ಘ ಇತಿಹಾಸವನ್ನು ಮನುಕುಲದ ಸೇವೆಯಲ್ಲಿ ಕಳೆದಿರುವ ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಲಕ್ಷಾಂತರ ಯೋಜನೆಗಳೊಂದಿಗೆ ಮಾನವ ಸೇವೆಗೆ ಮುಂದಾಗಿದೆ.
ಕಾರ್ಯಪ್ಪ ಕಾಲೇಜಿನ ಕ್ರೀಡಾಪಟುಗಳಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ರೋಟರಿ ತನ್ನ ಕಾರ್ಯಯೋಜನೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಎಂದು ಪ್ರಶಂಶಿಸಿದರು. ವಿದ್ಯಾರ್ಥಿಗಳು ಈ ಘಟಕದ ಪ್ರಯೋಜನವನ್ನು ಪಡೆದುಕೊಳ್ಳುವಂತೆಯೂ ಅವರು ಕರೆ ನೀಡಿದರು.
ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ರಾಘವ ಮಾತನಾಡಿ, ಕಾರ್ಯಪ್ಪ ಕಾಲೇಜಿನ ಅನೇಕ ಬೇಡಿಕೆಗಳನ್ನು ರೋಟರಿ ಸಂಸ್ಥೆಗಳು ಈಡೇರಿಸುವ ಮೂಲಕ ನೈಜವಾದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿದೆ. ಹಳ್ಳಿಹಳ್ಳಿಗೂ ರೋಟರಿ ತನ್ನ ಸದಸ್ಯರ ಮೂಲಕ ಸಹಾಯ ಯೋಜನೆ ಕೈಗೊಳ್ಳುವುದರೊಂದಿಗೆ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಶ್ಲಾಘಿಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಕಿಗ್ಗಾಲು ಹರೀಶ್ ಮಾತನಾಡಿ, ಕಾರ್ಯಪ್ಪ ಕಾಲೇಜಿನ ಕ್ರೀಡಾಳುಗಳಿಗೆ ಮೈದಾನದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ರೋಟರಿ ವುಡ್ಸ್ ೧೦೦ ದಿನಗಳಲ್ಲಿಯೇ ಸದಸ್ಯರು, ಉಪನ್ಯಾಸಕ ವರ್ಗದ ಸಹಕಾರದೊಂದಿಗೆ ರೂ. ೧.೮೦ ಲಕ್ಷ ಮೌಲ್ಯದ ಕುಡಿಯುವ ನೀರಿನ ಘಟಕದ ಯೋಜನೆ ಪೂರ್ಣಗೊಳಿಸಿದೆ ಎಂದರು.
ರೋಟರಿ ವಲಯ ೬ ರ ಸಹಾಯಕ ಗವರ್ನರ್ ದೇವಣಿರ ಕಿರಣ್, ಈ ಕಾಲೇಜಿಗೆ ಮೊದಲು ಮತ್ತು ಕೊನೇ ಸಲ ೧೯೮೩ ರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕಾರ್ಯಕ್ರಮಕ್ಕೆ ಬಂದ ಘಟನೆಯನ್ನು ಸ್ಮರಿಸಿಕೊಂಡು ಶಿಸ್ತು ಮತ್ತು ಸಮಯಪಾಲನೆ ಬಗ್ಗೆ ಕಾರ್ಯಪ್ಪ ಅವರ ಕಾಳಜಿಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಯೋಜನಾ ನಿರ್ದೇಶಕ ರಾಜೇಶ್ ಚೌಧರಿಯವರನ್ನು ಸನ್ಮಾನಿಸಲಾಯಿತು. ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂಧರ್ ವಂದಿಸಿದ ಕಾರ್ಯಕ್ರಮವನ್ನು ವಸಂತ್ ಕುಮಾರ್ ನಿರ್ವಹಿಸಿದರು. ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ ಮಾಜಿ ಸಹಾಯಕ ಗವರ್ನರ್ ದೇವಣಿರ ತಿಲಕ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ರೋಟರಿ ಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.