ಶನಿವಾರಸಂತೆ/ ಮುಳ್ಳೂರು, ಮಾ. ೨೩: ತ್ರಿವಳಿ ಜಿನಾಲಯದಲ್ಲಿ ದೇವತೆಗಳಿಗೆ ಸಂತೋಷವಾಗುವAತೆ ಸೇವೆ ನಡೆದಿದ್ದು ಪರಂಪರೆಯನ್ನು ಮುಂದುವರೆಸಿಕೊAಡು ಹೋಗಬೇಕು ಎಂದು ಶ್ರೀ ಕ್ಷೇತ್ರ ಕನಕಗಿರಿ ದಿಗಂಬರ ಜೈನಮಠದ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಹೇಳಿದರು.

ಸಮೀಪದ ಮುಳ್ಳೂರು ಗ್ರಾಮದ ತ್ರಿವಳಿ ಜಿನಾಲಯದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ನಾಲ್ವರು ಭಟ್ಟಾರಕ ಮಹಾಸ್ವಾಮಿಗಳವರಿಗೆ ಫಲಪುಷ್ಪ ಸಮರ್ಪಣೆ ನಂತರ ಧಾರ್ಮಿಕ ಸಭೆಯಲ್ಲಿ ದೀಪ ಪ್ರಜ್ವಲನೆ ಮಾಡಿದ ಅವರು ಆಶೀರ್ವಚನ ನೀಡಿದರು.

ತ್ರಿವಳಿ ಜಿನಮಂದಿರದಲ್ಲಿ ಸಂಪ್ರದಾಯಬದ್ಧವಾಗಿ ಪೂಜೆ ನಡೆಯುತ್ತಿದ್ದು, ಪರಂಪರೆ ಜೀವಂತವಾಗಿದೆ. ಪರಂಪರೆ ಕರ್ತವ್ಯದ ಅರಿವಿನಿಂದ ಶುದ್ಧಾಚಾರ, ಭಕ್ತಿಯಿಂದ ನಡೆದುಕೊಳ್ಳಬೇಕು. ಅಸ್ತಿತ್ವದ ಪರಿಚಯ ಧರ್ಮದಿಂದಲ್ಲ; ಆಚರಣೆಯಲ್ಲಿ ಧರ್ಮವಿರಲಿ. ಇತಿಹಾಸದಿಂದ ಗೌರವ ಲಭಿಸುತ್ತದೆ ಎಂದರು.

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಆಶೀರ್ವಚನ ನೀಡುತ್ತಾ, ೧೦ನೇ ಶತಮಾನದಲ್ಲಿ ಕೊಡಗು ಜಿಲ್ಲೆಯಲ್ಲಿ ಜೈನಧರ್ಮ ಪ್ರಭಾವಶಾಲಿಯಾಗಿತ್ತು. ಕೋಗಾಳ್ವರ ಜೈನಗುರು ಗುಣಸೇನಾಚಾರ್ಯರಿಗಾಗಿ ರಾಣಿ ಪೋಚಬ್ಬರಸಿ ತ್ರಿವಳಿ ಜಿನಾಲಯ ನಿರ್ಮಿಸಿದ ಇತಿಹಾಸವಿದೆ. ಪಾರ್ಶ್ವನಾಥ, ಚಂದ್ರನಾಥ, ಶಾಂತಿನಾಥ ಬಸದಿಗಳ ಸಂರಕ್ಷಣೆಗೆ ಸಾವಿರಾರು ಕೈಗಳ ಸೇವೆಬೇಕು. ಕರ್ತವ್ಯವೂ ಆಗಬೇಕು ಎಂದರು.

ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನಮಠದ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಆಶೀರ್ವಚನ ನೀಡಿ, ಜಿನಾಲಯಗಳು ಭಗವಂತನ ಮೋಕ್ಷದ ಪ್ರತೀಕವಾಗಿದೆ. ಜಿನಾಲಯಗಳನ್ನು ಸಂರಕ್ಷಿಸುವುದು ಭಕ್ತರ ಕರ್ತವ್ಯವಾಗಿದೆ ಎಂದರು.

ಕಂಬದಹಳ್ಳಿ ಮಠದ ಆನಂದ ಕೀರ್ತಿ ವಿಚಾರಕ ಭಟ್ಟಾರಕ ಮಹಾಸ್ವಾಮಿ ಮಾತನಾಡಿ, ಶ್ರವಾವಕರು ನಿತ್ಯ ಭಗವಂತರ ಪೂಜೆಯಲ್ಲಿ ನಿರತರಾಗಬೇಕು. ಜಿನರನ್ನು ಸ್ತುತಿಸುವುದೇ ಶ್ರಾವಕರ ಧರ್ಮ ಹಾಗೂ ಸೇವೆಯಾಗಬೇಕು. ಎಲ್ಲಾ ಜೀವರಾಶಿಯಲ್ಲಿ ಶಾಂತಿ ನೆಲೆಸಬೇಕು ಎಂದರು.

ನಿವೃತ್ತ ನ್ಯಾಯಾಧೀಶರಾದ ದೇವಪ್ಪ ಮಾತನಾಡಿ, ತ್ರಿವಳಿ ಜೈನಮಂದಿರಗಳಲ್ಲಿ ಪ್ರತಿವರ್ಷ ವಾರ್ಷಿಕ ಪೂಜಾ ಮಹೋತ್ಸವ ನಡೆಯಬೇಕು ಎಂದು ಮನವಿ ಮಾಡಿದರು.

ಲೇಖಕ ವೀರೇಂದ್ರ ಬೇಗೂರು ಪ್ರಾಸ್ತಾವಿಕ ನುಡಿಯಾಡಿದರು. ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಅಧ್ಯಕ್ಷೆ ಡಿ.ಸುಜಲಾದೇವಿ ಕಾರ್ಯಕ್ರಮ ನಿರ್ವಹಿಸಿದರು. ಹಾಸನ ಜೈನಸಂಘ-ಸAಸ್ಥೆಗಳ ಪದಾಧಿಕಾರಿಗಳು, ಮುಳ್ಳೂರು ಜಿನಮಂದಿರ ಸೇವಾ ಸಮಿತಿ ಪದಾಧಿಕಾರಿಗಳು, ಮುಳ್ಳೂರು ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.

ನಂತರ ತ್ರಿವಳಿ ಜಿನಮಂದಿರದಲ್ಲಿ ಭಗವಂತರಿಗೆ ಪಂಚಾಮೃತಾಭಿಷೇಕ, ಶಾಂತಿಧಾರ, ಅಷ್ಟವಿಧಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಉಪಾಹಾರ ಮತ್ತು ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.