ಸಿದ್ದಾಪುರ, ಮಾ. ೨೩: ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ನಾಲ್ಕು ದಿನಗಳ ಕಾಲ ದೇವಾಲಯದಲ್ಲಿ ಗಣಪತಿ ಹೋಮ, ಶುದ್ಧ ಕಳಸ, ಇರುಬೆಳಕು, ನೆರಪು ಬಲಿ, ವಸಂತ ಪೂಜೆ, ಸಾಮೂಹಿಕ ಆಶ್ಲೇಷ ಬಲಿ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ದೇವರ ಆರಾಟ್ ಬಲಿ ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ನಾಲ್ಕು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವಾರ್ಷಿಕೋತ್ಸವದ ಪ್ರಯುಕ್ತ ಕೊನೆ ದಿನ ರಾತ್ರಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ದೇವಾಲಯದ ತಕ್ಕ ಮುಖಸ್ಥರಾದ ನಂಜಪ್ಪ ಹಾಗೂ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಜಿ. ಚಂದ್ರಶೇಖರ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.