ವೀರಾಜಪೇಟೆ, ಮಾ. ೨೧: ವೀರಾಜಪೇಟೆ ಸರಕಾರಿ ಆಸ್ಪತ್ರೆ ಹಾಗೂ ವೀರಾಜಪೇಟೆ ಮಹಾ ದಂತ ವೈದ್ಯ ಕಾಲೇಜು ಇವರ ಸಹಯೋಗದಲ್ಲಿ ವಿಶ್ವ ಬಾಯಿ ಆರೋಗ್ಯ ದಿನ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಹಲ್ಲಿನ ಸಮಸ್ಯೆಗಳು, ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ ಸಿಂಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಗುಟ್ಕಾವನ್ನು ಉಪಯೋಗಿಸುವುದು, ಎಲ್ಲೆಂದರಲ್ಲಿ ಉಗುಳುವುದು, ಧೂಮಪಾನ ಮಾಡುವುದು ಜಾಸ್ತಿಯಾಗಿದೆ. ಉತ್ತರಪ್ರದೇಶ, ಬಂಗಾಳ, ಅಸ್ಸಾಮಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಬಾಯಿ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅನೇಕರು ಬರುತ್ತಿದ್ದಾರೆ. ಎಷ್ಟು ಬಾರಿ ಮನವರಿಕೆ ಮಾಡಿದರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಸರಕಾರಿ ಆಸ್ಪತ್ರೆಯ ವೈದ್ಯರುಗಳಾದ ಡಾ. ಸಮಿರ್, ಡಾ. ಹೇಮಪ್ರಿಯ, ಡಾ. ಸೌಮ್ಯ, ದಂತ ವೈದ್ಯಕೀಯ ಕಾಲೇಜಿನ ವೈದ್ಯರುಗಳಾದ ಡಾ. ಜಿತೇಷ್, ಡಾ. ರಾಧಿಕಾ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಶುಶ್ರೂಷಕಿಯರು, ಕಾರ್ಯಕ್ರಮ ಆಯೋಜಕರು ಭಾಗವಹಿಸಿದ್ದರು.

ನಂತರ ಜಾಥಾ ನಡೆಸಿದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಗಡಿಯಾರ ಕಂಬದ ಬಳಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ನಡೆಸಿದರು.