ಮಾದಾಪುರ, ಮಾ. ೨೧:ಇಲ್ಲಿನ ಜಂಬೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪುನರ್ವಸತಿ ಬಡಾವಣೆ ನಿವಾಸಿಗಳು ಕಳೆದ ೮ ದಿನಗಳಿಂದ ಕುಡಿಯುವ ನೀರಿಗಾಗಿ ಕನವರಿಸುತ್ತಿದ್ದಾರೆ. ಕಳೆದ ಶುಕ್ರವಾರ ತಡರಾತ್ರಿ ೨.೩೦ರ ಸುಮಾರಿಗೆ ನೀರು ಪೂರೈಕೆ ಆಗಿದೆ. ಈ ವೇಳೆ ಬಹುತೇಕ ಮಂದಿ ಗಾಢ ನಿದ್ದೆ ಮಾಡಿದ್ದಾರೆ. ಅನಿವಾರ್ಯವಾಗಿ ಕೆಲವರಿಗೆ ಗೊತ್ತಾಗಿ ನೀರು ತುಂಬಿಸುವ ಪ್ರಯತ್ನ ಮಾಡಿದ್ದಾರೆ. ಆ ಬಳಿಕ ಇಂದಿಗೆ ಎಂಟು ದಿನಗಳಿಂದ ನೀರಿಲ್ಲದೆ ಕನವರಿಸುತ್ತಿದ್ದಾರೆ. ಇಲ್ಲಿ ಬಹುತೇಕ ಕಾರ್ಮಿಕರು ನಿತ್ಯ ಬೇರೆ ಬೇರೆ ಕಡೆಗಳಲ್ಲಿ ತೋಟ ಕೆಲಸ ಇತ್ಯಾದಿಗೆ ಹಗಲು ಹೋಗಿ ಸಂಜೆ ಮನೆ ಸೇರುವವರಾಗಿದ್ದಾರೆ.
ಜಂಬೂರು ಈ ಪುನರ್ವಸತಿ ಕೇಂದ್ರ ಮಾದಾಪುರ ಗ್ರಾಮ ಪಂಚಾಯಿತಿಗೆ ಸೇರಿದೆ. ಮನೆಯ ಕಂದಾಯ ಹಾಗೂ ನೀರಿನ ಕಂದಾಯ ವಸೂಲಿ ಮಾಡುತ್ತಿದ್ದಾರೆ. ಆದರೆ ಯಾವುದೇ ಸಮಸ್ಯೆಗೆ ಓಗೊಡುತ್ತಿಲ್ಲ. ಈ ಪುನರ್ವಸತಿ ಬಡಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲ. ಹಾಗಾಗಿ ಮೇಲಿಂದ ಮೇಲೆ ನೀರಿನ ಸಮಸ್ಯೆ ಎದುರಿಸುತ್ತಿರುವಂತಾಗಿದೆ.
ಕೇಳಿದರೆ ಗ್ರಾಮ ಪಂಚಾಯಿತಿ ಮಂದಿ ಮೋಟರ್ ರಿಪೇರಿ, ಕರೆಂಟ್ ಇಲ್ಲ ಇತ್ಯಾದಿ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಈಚೆಗೆ ನಡೆದ ಗ್ರಾಮಸಭೆಯಲ್ಲಿ ಸ್ಥಳೀಯ ನಿವಾಸಿಗಳು ವಿಷಯ ಪ್ರಸ್ತಾಪಿಸಿದ ವೇಳೆ ಗ್ರಾಮಪಂಚಾಯಿತಿ ಅಧ್ಯಕ್ಷ ಉಡಾಫೆಯಿಂದ ನೀವು ಪತ್ರಿಕೆಗಳಲ್ಲಿ ಆಗಾಗ ಸಮಸ್ಯೆಗಳನ್ನು ಹಾಕುತ್ತೀರಿ ಅದೇನು ಮಾಡುತ್ತೀರಿ, ಮಾಡಿಕೊಳ್ಳಿ ಎಂದು ಕೂಗಾಡಿದ್ದಾರೆ. ಆ ಬಳಿಕ ಕಳೆದ ಎಂಟು ದಿನಗಳಿಂದ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಸಿಬ್ಬಂದಿಯನ್ನು ವಿಚಾರಿಸಿದಾಗ ಬೆಳಿಗ್ಗೆ ಸರಿಯಾಗುತ್ತದೆ. ಸಂಜೆ ನೀರು ಪೂರೈಕೆ ಆಗುತ್ತದೆ ಎಂಬಿತ್ಯಾದಿ ಸಬೂಬು ಹೇಳುತ್ತಾ ಎಂಟು ದಿನಗಳಿಂದ ಜನತೆ ಸುಡು ಬಿಸಿಲಿನ ತಾಪದ ನಡುವೆ ಹಗಲಿರುಳು ಕುಡಿಯುವ ನೀರಿಗೆ ಕನವರಿಸುವಂತಾಗಿದೆ.