ಸೋಮವಾರಪೇಟೆ, ಮಾ. ೧೭: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಸವನಕೊಪ್ಪದ ಮಂಜುನಾಥ್, ಉಪಾಧ್ಯಕ್ಷರಾಗಿ ಕರ‍್ಲಳ್ಳಿ ಗ್ರಾಮದ ಕೆ.ಎಂ. ರೋಹಿಣಿ ಅವರುಗಳು ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಜಿ.ಎಸ್. ನಾಗರಾಜ್ ಮತ್ತು ಉಪಾಧ್ಯಕ್ಷರಾಗಿದ್ದ ಜಿ.ಜಿ. ಮಲ್ಲಿಕಾ ಅವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಬಸವನಕೊಪ್ಪದ ಮಂಜುನಾಥ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಕರ‍್ಲಳ್ಳಿ ಗ್ರಾಮದ ಕೆ.ಎಂ. ರೋಹಿಣಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಳಿದಂತೆ ಯಾರೂ ನಾಮಪತ್ರ ಸಲ್ಲಿಸದಿದ್ದುದರಿಂದ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಕೆ. ಸುಮಾ, ಗೌರಿ, ಜಿ.ಜಿ. ಗಣೇಶ್, ವಿಶಾಲಾಕ್ಷಿ, ಅಜ್ಜಳ್ಳಿ ನವೀನ್, ಸಿ.ಇ. ವೆಂಕಟೇಶ್ ಭಾಗವಹಿಸಿದ್ದರು. ಚುನಾವಣಾ ಅಧಿಕಾರಿಯಾಗಿ ಸೋಮವಾರಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಶ್ರೀದೇವಿ ಕಾರ್ಯನಿರ್ವಹಿಸಿದರು. ಪಂಚಾಯಿತಿ ಪಿಡಿಓ ಲಿಖಿತಾ ಸಹಕರಿಸಿದರು.

ಸ್ಥಳೀಯ ಮುಖಂಡರುಗಳಾದ ಗೌಡಳ್ಳಿ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಬಿ, ಭರತ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ. ದೀಪಕ್, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಮೋರಿಕಲ್ಲು ಗಿರೀಶ್ ಮಲ್ಲಪ್ಪ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕೂಗೆಕೋಡಿ ಆದರ್ಶ, ಗೌಡಳ್ಳಿ ಸುನಿಲ್ ಕುಮಾರ್, ಶುಂಠಿ ಗುರುಪ್ರಸಾದ್ ಸೇರಿದಂತೆ ಇತರರು ಇದ್ದರು.