ಸೋಮವಾರಪೇಟೆ, ಮಾ. ೧೭: ಜಿಲ್ಲೆಯ ರೈತರು, ವಿದ್ಯಾರ್ಥಿಗಳು ಹಾಗೂ ಎಸ್‌ಸಿ ಎಸ್‌ಟಿ ಗಳಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ, ಕೊಡಗು ವಿವಿಯನ್ನು ಉಳಿಸುವುದು, ಸಿ ಮತ್ತು ಡಿ ಜಾಗ ಸಮಸ್ಯೆ ಇತ್ಯರ್ಥ ಹಾಗೂ ಎಸ್‌ಸಿ, ಎಸ್‌ಟಿ ಮೀಸಲು ಹಣವನ್ನು ಅದೇ ಉದ್ದೇಶಕ್ಕೆ ಬಳಸಬೇಕೆಂದು ಒತ್ತಾಯಿಸಿ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಪಟ್ಟಣದಲ್ಲಿ ಸತ್ಯಾಗ್ರಹ ನಡೆಯಿತು.

ಪಟ್ಟಣದ ಜೇಸೀ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗಿಗೆ ಕೊಡುಗೆಯಾಗಿ ಬಂದ ವಿಶ್ವವಿದ್ಯಾಲಯವನ್ನು ಅನುದಾನ ಕೊರತೆಯ ನೆಪವೊಡ್ಡಿ ಮುಚ್ಚುವ ಹುನ್ನಾರ ನಡೆಸಲಾಗಿದೆ.

(ಮೊದಲ ಪುಟದಿಂದ) ಬೇರೆ ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ನೆಪವೊಡ್ಡಿ ಶಾಶ್ವತವಾಗಿ ಮುಚ್ಚುವ ಯತ್ನವನ್ನು ಸರ್ಕಾರ ನಡೆಸುತ್ತಿದೆ. ಇದಕ್ಕೆ ಸ್ಥಳೀಯ ಈರ್ವರು ಕಾಂಗ್ರೆಸ್ ಶಾಸಕರು ತೀಕ್ಣ ಪ್ರತಿರೋಧ ತೋರದೇ ಕೈಕಟ್ಟಿ ಕುಳಿತಿದ್ದಾರೆ ಎಂದು ಮುಖಂಡರುಗಳು ಅಸಮಾಧಾನ ಹೊರಹಾಕಿದರು.

ಇದರೊಂದಿಗೆ ಸಿ ಮತ್ತು ಡಿ ಜಾಗದ ಸಮಸ್ಯೆಯನ್ನು ಜೀವಂತವಾಗಿರಿಸಿ ಕೊಡಗಿನ ರೈತರನ್ನು ಒಕ್ಕಲೆಬ್ಬಿಸಲು ಸಂಚು ನಡೆಸಲಾಗಿದೆ. ಸಿ ಮತ್ತು ಡಿ ಜಾಗವನ್ನು ಅರಣ್ಯವೆಂದು ಘೋಷಿಸಲು ತೆರೆಮರೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಶಾಸಕರುಗಳು ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಳಸಲಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರಿಗೆ ನೀಡಿ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಪ್ರಮುಖರು ದೂರಿದರು.

ಈ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಜಿಲ್ಲೆಯ ಈರ್ವರು ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ರಾಜ್ಯ ಕಾಂಗ್ರೆಸ್ ಸರ್ಕಾರದ ಸಹಿತ ಜಿಲ್ಲೆಯ ಈರ್ವರು ಶಾಸಕರ ವಿರುದ್ಧ ಕಿಡಿಕಾರಿದರು. ಜಿಲ್ಲೆಗೆ ಅನ್ಯಾಯವಾಗುತ್ತಾ ಬಂದಿದ್ದರೂ ಈರ್ವರು ಶಾಸಕರು ಸದನದಲ್ಲಿ ಗಟ್ಟಿ ದನಿಯೆತ್ತದೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಎದುರು ಬೇಡುವ ಸ್ಥಿತಿಗೆ ತಲುಪಿದ್ದಾರೆ. ಈ ಎರಡು ವರ್ಷದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಯೋಜನೆಗಳನ್ನೂ ಸ್ಥಗಿತಗೊಳಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡವರು, ಕೂಲಿ ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಬಿಜೆಪಿ ಸರ್ಕಾರ ಕೊಡಗಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ನೀಡಿದೆ. ಇದನ್ನು ಮುಂದುವರೆಸಲೂ ಅನುದಾನ ಇಲ್ಲವೆಂದು ಹೇಳುವ ಮೂಲಕ ರಾಜ್ಯ ಸರ್ಕಾರ ದಿವಾಳಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಇಂತಹ ದರಿದ್ರ ಸರ್ಕಾರ ಈವರೆಗೆ ರಾಜ್ಯದಲ್ಲಿ ಬಂದಿರಲಿಲ್ಲ ಎಂದು ದೂರಿದರು.

ಇದರೊಂದಿಗೆ ಸಿ ಮತ್ತು ಡಿ ಜಾಗವನ್ನು ರೈತರಿಂದ ಕಿತ್ತುಕೊಂಡು ಅರಣ್ಯ ಇಲಾಖೆಗೆ ನೀಡಲು ಸರ್ಕಾರ ಸಂಚು ರೂಪಿಸಿದೆ. ಈ ಹಿಂದೆ ನಡೆದ ಪ್ರತಿಭಟನೆ ಸಂದರ್ಭ ಶಾಸಕರು ಮನವಿ ಸ್ವೀಕರಿಸಿ ತೆರಳಿದವರು, ನಂತರ ಇಂತಹ ಗಂಭೀರ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡಿಲ್ಲ. ಇದೀಗ ರೈತರಿಗೆ ನೋಟೀಸ್‌ಗಳು ಬರುತ್ತಿದ್ದು, ಶಾಸಕರು ಮೌನಕ್ಕೆ ಶರಣಾಗಿದ್ದಾರೆ ಎಂದು ರಂಜನ್ ಆರೋಪಿಸಿದರು.

ರೈತರ ಸ್ವಂತ ಜಾಗದಲ್ಲಿರುವ ಮರಗಳಿಗೆ ಸಂಖ್ಯೆ ನಮೂದಿಸುವ ಮೂಲಕ ಹಕ್ಕು ಕಿತ್ತುಕೊಳ್ಳಲು ಅರಣ್ಯ ಇಲಾಖೆ ಯತ್ನಿಸುತ್ತಿದೆ. ಸಿ ಮತ್ತು ಡಿ ಜಾಗದಲ್ಲಿ ತೋಟ, ಮನೆಗಳನ್ನು ನಿರ್ಮಿಸಿಕೊಂಡು ನೆಲೆಸಿರುವವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗುತ್ತಿದೆ. ಎಲ್ಲಾ ವರ್ಗದ ಜನರಿಗೂ ಕಾಂಗ್ರೆಸ್ ಸರ್ಕಾರದಿಂದ ಕಿರುಕುಳ ಎದುರಾಗುತ್ತಿದೆ. ಇಂತಹ ಸರ್ಕಾರ ಆದಷ್ಟು ಬೇಗ ತೊಲಗಬೇಕು ಎಂದರು.

ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಮೀಸಲಿದ್ದ ಕೋಟ್ಯಂತರ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸಲಾಗುತ್ತಿದೆ. ದಲಿತರ ಪರ ಕಾಳಜಿಯಿಲ್ಲದ ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ಓಲೈಕೆಯಲ್ಲೇ ಕಾಲ ಕಳೆಯುತ್ತಿದೆ. ಕಾಂಗ್ರೆಸ್‌ನ ತುಷ್ಟೀಕರಣ ನೀತಿಗೆ ಹಿಂದೂಗಳು ಬಲಿಯಾಗುತ್ತಿದ್ದಾರೆ ಎಂದರು.

ಇAತಹ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಿರಂತರವಾಗಿ ಪ್ರತಿಭಟನೆ ನಡೆಸಲಿದೆ. ಸಿ ಮತ್ತು ಡಿ ಜಾಗದ ಸಮಸ್ಯೆ ಬಗ್ಗೆ ಗ್ರಾಮ ಮಟ್ಟದಿಂದ ಹೋರಾಟ ಸಂಘಟಿಸಲಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಕೊಡಗಿನಲ್ಲಿ ಇಂಜಿನಿಯರಿAಗ್, ಮೆಡಿಕಲ್ ಕಾಲೇಜನ್ನು ಬಿಜೆಪಿ ಅವಧಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಸೋಮವಾರಪೇಟೆಯಲ್ಲಿ ೫ ಕೋಟಿ ವೆಚ್ಚದಲ್ಲಿ ಟರ್ಫ್ ಮೈದಾನ, ೩ ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಿದ್ದರೂ, ಅದರ ಉದ್ಘಾಟನೆಗೆ ನಮ್ಮನ್ನು ಕರೆದಿಲ್ಲ. ನಮ್ಮ ಅವಧಿಯ ಯೋಜನೆಗಳನ್ನು ಈಗಿನ ಶಾಸಕರು ಮಾಡಿದ್ದಾರೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಾವುಗಳ ಇಂತಹ ಸಣ್ಣತನದ ರಾಜಕಾರಣ ಮಾಡಿರಲಿಲ್ಲ ಎಂದು ರಂಜನ್ ಟೀಕಿಸಿದರು.

ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜೀ ಅಧ್ಯಕ್ಷ ಬಿ.ಬಿ. ಭಾರತೀಶ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಎಸ್‌ಸಿ ಮೋರ್ಚಾ ಅಧ್ಯಕ್ಷ ರವಿ ಮಡಿಕೇರಿ ಅವರುಗಳು ಮಾತನಾಡಿದರು. ನಂತರ ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಮಂಡಲ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಮಾಜೀ ಅಧ್ಯಕ್ಷ ಮನು ರೈ, ಪ್ರಮುಖರಾದ ಹೆಚ್.ಕೆ. ಮಾದಪ್ಪ, ಅಭಿಮನ್ಯುಕುಮಾರ್, ಹೆಚ್.ಎನ್. ತಂಗಮ್ಮ, ಹುಲ್ಲೂರಿಕೊಪ್ಪ ಚಂದ್ರು, ರೇಣುಕಾ ವೆಂಕಟೇಶ್, ಯಶಾಂತ್ ಕುಮಾರ್, ಶ್ರೀನಿಧಿ ಲಿಂಗಪ್ಪ, ದರ್ಶನ್ ಜೋಯಪ್ಪ, ಪಿ.ಕೆ.ಚಂದ್ರು, ಪ್ರವೀಣ್, ಅಜೀಶ್‌ಕುಮಾರ್, ಮೋಕ್ಷಿಕ್, ಸುಧಾಕರ್, ಎಸ್.ಆರ್. ಸೋಮೇಶ್, ಸವಿತಾ ಸತೀಶ್, ಎಸ್.ಪಿ. ಪೊನ್ನಪ್ಪ, ಶರತ್‌ಚಂದ್ರ, ಮಡಿಕೇರಿ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಕನ್ನಂಡ ಸಂಪತ್ ಸೇರಿದಂತೆ ಇತರರು ಭಾಗವಹಿಸಿದ್ದರು.