ಮಡಿಕೇರಿ, ಮಾ. ೧೭: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕಾಗಿ ರೂಪಿಸಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳಿಗೆ ಗೌರವ ಧನ ಬಿಡುಗಡೆಯಾಗಿದೆ. ಫೆಬ್ರವರಿಯಲ್ಲಿ ಅಧ್ಯಕ್ಷರುಗಳ ಖಾತೆಗೆ ಹಣ ಜಮೆ ಆಗಿದ್ದು, ಕಳೆದ ಮಾರ್ಚ್ ತಿಂಗಳಿನಿAದ ಈ ವರ್ಷ ಫೆಬ್ರವರಿವರೆಗಿನ ಗೌರವ ಧನ ಬಿಡುಗಡೆಯಾಗಿದೆ.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚಿಸಿ ೨೦೨೪ರ ಮಾರ್ಚ್ನಲ್ಲಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿತ್ತು.
ಕೊಡಗು ಜಿಲ್ಲೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರುಗಳನ್ನು ಹಾಗೂ ಉಪಾಧ್ಯಕ್ಷರು, ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಆದರೆ ಸಮಿತಿಯ ಗೌರವಧನ ಬಿಡುಗಡೆಯಾಗಿರಲಿಲ್ಲ. ಇದೀಗ ಫೆಬ್ರವರಿ ತಿಂಗಳಲ್ಲಿ ಏಕಕಾಲಕ್ಕೆ ಒಂದು ವರ್ಷದ ಗೌರವಧನ ಬಿಡುಗಡೆಯಾಗಿದ್ದು, ಅನುಷ್ಠಾನ ಸಮಿತಿ ಅಧ್ಯಕ್ಷ ಮತ್ತು ಸದಸ್ಯರಾದವರ ಕೈಗೆ ಗೌರವ ಧನ ಸೇರಿಕೊಂಡಿದೆ.
ಸರ್ಕಾರಿ ಸಭೆಗೆ ಭಾಗವಹಿಸಲು ಅವಕಾಶ!
ಗ್ಯಾರಂಟಿ ಅನುಷ್ಠಾನ ಸಮಿತಿಯು ನಾಮಕಾವಸ್ಥೆಗೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಇತ್ತು. ರಾಜ್ಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೇಮಕ ಮಾಡಲಾಗಿತ್ತು. ಆದರೆ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಲು ಯಾರಿಗೂ ಆಸಕ್ತಿ ಇರಲಿಲ್ಲ. ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರುಗಳಿಗೆ ಜಿಲ್ಲಾ ಮಟ್ಟದ ಕೆಡಿಪಿ ಮತ್ತು ಸರ್ಕಾರಿ ಸಭೆಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಗ್ಯಾರಂಟಿ ಅನುಷ್ಠಾನ ಸಮಿತಿಯೂ ಪರಿಣಾಮಕಾರಿಯಾಗಿ ಇದುವರೆಗೆ ಕಾರ್ಯನಿರ್ವಹಿಸಿಲ್ಲ ಎಂಬ ಮಾತುಗಳಿವೆ. ಇಂದಿಗೂ ಕೂಡ ಸರ್ಕಾರದ ಗ್ಯಾರಂಟಿಗಳು ಅರ್ಹ ಜನರಿಗೆ ತಲುಪುತ್ತಿಲ್ಲ.
ನಾನಾ ಕಾರಣದಿಂದಾಗಿ ಗ್ಯಾರಂಟಿ ತಪ್ಪಿರುವ ಜನರು ಜಿಲ್ಲೆಯಲ್ಲಿದ್ದಾರೆ. ನಾಮಕಾವಸ್ಥೆಗೆ ಮಾತ್ರ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯುತ್ತಿದೆ ಹೊರತು ಗ್ಯಾರಂಟಿ ಯೋಜನೆಗಳಿಂದ ಹೊರಗುಳಿದಿರುವ ಫಲಾನುಭವಿಗಳನ್ನು ಗುರುತಿಸಿ ಪಂಚಾಯಿತಿ ಮಟ್ಟದಲ್ಲಿ ಕಾರ್ಯಾಗಾರ ಮಾಡುವ ಕೆಲಸಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಇದುವರೆಗೆ ಮುಂದಾಗಿಲ್ಲ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಸಭೆಗೆ ಮಾತ್ರ ಕೊಡಗು ಜಿಲ್ಲೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸೀಮಿತಗೊಂಡಿದೆ. ಇದೀಗ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಯಾಗಿ ಮಾರ್ಚ್ ತಿಂಗಳಿಗೆ ಒಂದು ವರ್ಷ ಪೂರ್ಣಗೊಂಡಿದೆ. ಸಮಿತಿಯ ಅಧಿಕಾರಾವಧಿ ೨೦ ತಿಂಗಳಾಗಿದ್ದು, ನಂತರ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಜಿಲ್ಲಾಧ್ಯಕ್ಷರಿಗೆ ೪೦ ಸಾವಿರ - ತಾಲೂಕು ಅಧ್ಯಕ್ಷರಿಗೆ ೨೫ ಸಾವಿರ
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರ ಗೌರವಧನ ನಿಗದಿಪಡಿಸಿ ಕಳೆದ ವರ್ಷ ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಫೆಬ್ರವರಿ ತಿಂಗಳಲ್ಲಿ ಅಧ್ಯಕ್ಷರುಗಳಿಗೆ ಹಣ ಕೈಸೇರಿದೆ.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷರಿಗೆ ಮಾಸಿಕ ರೂ. ೪೦ ಸಾವಿರ ಹಾಗೂ ತಾಲೂಕು ಅಧ್ಯಕ್ಷರಿಗೆ ಮಾಸಿಕ ೨೫ ಸಾವಿರ ರೂ ಮಾಸಿಕ ಗೌರವಧನ ನಿಗದಿಯಾಗಿದೆ. ಕಳೆದ ಮಾರ್ಚ್ ತಿಂಗಳಿನಿAದ ಈ ವರ್ಷದ ಫೆಬ್ರವರಿ ತಿಂಗಳವರೆಗಿನ ಗೌರವಧನ ಫೆಬ್ರವರಿ ತಿಂಗಳಲ್ಲಿ ಅಧ್ಯಕ್ಷರುಗಳ ಖಾತೆಗೆ ಜಮೆ ಆಗಿದೆ. ಜಿಲ್ಲಾ ಮತ್ತು ತಾಲೂಕು ಸಮಿತಿ ಸದಸ್ಯರಿಗೂ ಕೂಡ ಹಣ ಜಮೆ ಆಗಿದೆ. ಜಿಲ್ಲಾ ಮತ್ತು ತಾಲೂಕು ಸಮಿತಿ ಸದಸ್ಯರು ಒಂದು ಸಭೆಗೆ ಹಾಜರಾದರೆ ೧,೧೦೦ ರೂ ಹಾಗೂ ೧೦೦ ರೂ ಭತ್ಯೆ ಸದಸ್ಯರ ಖಾತೆಗೆ ಜಮೆ ಆಗಿದೆ. ರಾಜ್ಯದ ೩೧ ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರುಗಳಿಗೆ ಏಕಕಾಲಕ್ಕೆ ಗೌರವಧನ ಬಿಡುಗಡೆಯಾಗಿದೆ. ಫೆಬ್ರವರಿ ತಿಂಗಳವರೆಗೆ ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಬಾಕಿ ಉಳಿದಿದ್ದ ಸಂದರ್ಭದಲ್ಲೇ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಗೌರವಧನ ಬಿಡುಗಡೆ ಮಾಡಿರುವ ಸರ್ಕಾರ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು. (ಕೆ.ಎಂ ಇಸ್ಮಾಯಿಲ್ ಕಂಡಕರೆ)