ಗೋಣಿಕೊಪ್ಪಲು, ಮಾ. ೧೬: ಹಲವು ಮಹಾಪುರುಷರ ಆಚರಣೆ ಯನ್ನು ರಾಜ್ಯ ಸರ್ಕಾರ ಮಾಡುತ್ತಾ ಬಂದಿದ್ದು ಯಾವದೇ ಪುಣ್ಯ ಪುರುಷರ ಆಚರಣೆ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಸಮುದಾಯ ಒಗ್ಗೂಡಿ ಆಚರಿಸುವಂತಾಗಬೇಕು ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್‌ಕುಮಾರ್ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಬಲಿಜ ಸಮಾಜ ನೇತೃತ್ವದಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರರ ೨೯೯ನೇ ಜಯಂತಿಯನ್ನು ಕೈವಾರ ತಾತಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಪುರುಷರ ಆದರ್ಶಗಳನ್ನು ನಾವು ಪಾಲಿಸಬೇಕು. ಕೈವಾರ ತಾತಯ್ಯ ಸುಮಾರು ೨೦೦ ವರ್ಷಗಳ ಹಿಂದೆ ನುಡಿದ ಕಾಲಜ್ಞಾನ ಭವಿಷ್ಯ ಇಂದು ನಿಜವಾಗುತ್ತಿದೆ. ದೈವ ಬಲದಿಂದ ಯಾವದೇ ಕಾರ್ಯ ಮಾಡಿದರೂ ಅದು ಯಶಸ್ವಿಯಾಗುತ್ತದೆ ಎಂದರು.

ಕೊಡಗು ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಕಳೆದ ೫ ವರ್ಷಗಳಿಂದ ಕೊಡಗು ಜಿಲ್ಲೆಯ ವಿವಿಧೆಡೆ ಕಾಲಜ್ಞಾನಿ ತಾತಯ್ಯ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕಾಲಜ್ಞಾನಿಗಳು ಸುಮಾರು ೧೧೦ ವರ್ಷ ಬದುಕಿದ್ದು ನಂತರ ಪರಕಾಯ ಪ್ರವೇಶ ಮೂಲಕ ಇಹಲೋಕ ತ್ಯಜಿಸುತ್ತಾರೆ. ೨೦೨೦ರಲ್ಲಿ ವಿಶ್ವವನ್ನು ನಡುಗಿಸಿದ ಕೊರೊನಾ ಮಹಾಮಾರಿ ಸೇರಿದಂತೆ ದೇಶ ವಿದೇಶಗಳಲ್ಲಿ ನಡೆಯುವ ಯುದ್ಧ, ಬರಗಾಲ, ಅಕ್ರಮ ಹಾಗೂ ಭೃಷ್ಟಾಚಾರದ ಬಗ್ಗೆ ಭವಿಷ್ಯವಾಣಿ ನುಡಿದಿದ್ದು ಎಲ್ಲವೂ ನಿಜವಾಗುತ್ತಿದೆ. ಈ ಬಗ್ಗೆ ಕೈವಾರ ತಾತಯ್ಯ ಕಾಲಜ್ಞಾನದ ಬಗ್ಗೆ ಬರೆದಿರುವ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಿಗಲು ವ್ಯವಸ್ಥೆ ಮಾಡಲಾಗುವದು ಎಂದರು.

ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿ ಗೀತಾ ನಾಯ್ಡು ಅವರು ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು.

ಸಮಾಜದ ನಿರ್ದೇಶಕ ವಿಜಯ್, ಅವರ ಪತ್ನಿ ಹೇಮಾವತಿ, ಸಮಾಜ ಸೇವಕಿ ಶ್ಯಾಮಲಾ, ಬಳೆ ಮಲಾರ ಪೂಜಾ ವ್ಯವಸ್ಥೆ ಮಾಡಿದ ಪೊನ್ನಂಪೇಟೆ ಲಕ್ಷಿö್ಮ ಅವರನ್ನು ಸನ್ಮಾನಿಸಲಾಯಿತು. ಪೊನ್ನಂಪೇಟೆ ತಾಲೂಕು ಕಚೇರಿ ಸಿಬ್ಬಂದಿ ವರ್ಗ, ಸಮಾಜದ ಬಲಿಜ ಬಂಧುಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.