ಸಿದ್ದಾಪುರ, ಮಾ. ೧೬: ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನೈಮ ಸಂಘಟನೆ ರಂಜಾನ್ ಉಪವಾಸ ಆಚರಣೆಯ ಅಂಗವಾಗಿ ಇಫ್ತಾರ್ ಸೌಹಾರ್ದ ಸಂಗಮವನ್ನು ನೆಲ್ಯಹುದಿಕೇರಿ ಶಾದಿ ಮಹಲ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಉಪವಾಸ ನಿರತ ಬಾಂಧವರಿಗೆ ಇಫ್ತಾರ್ ಕೂಟದಲ್ಲಿ ಅರೆಕಾಡು, ನಲ್ವತ್ತೆಕ್ರೆ, ಸಿದ್ದಾಪುರ , ಗುಯ್ಯ, ಒಂಟಿಯAಗಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಾಂದವರು ಪಾಲ್ಗೊಂಡಿದ್ದರು. ಇಫ್ತಾರ್‌ನಲ್ಲಿ ವಿವಿಧ ಬಗ್ಗೆಯ ಹಣ್ಣು ಹಂಪಲು, ತಂಪು ಪಾನೀಯ, ತಿಂಡಿ ತಿನಿಸುಗಳೊಂದಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮಹಲ್ ಖತೀಬ್ ರೌವೂಪ್ ಹುದವಿ ಮಾತನಾಡಿ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಂಟಿಕೊಪ್ಪದ ಪಿ.ಎಂ ಅಬ್ದುಲ್ ಲತೀಫ್ ಮಾತನಾಡಿ ಸೌಹಾರ್ದತೆಗೆ ಹೆಸರುವಾಸಿಯಾದ ಗ್ರಾಮದಲ್ಲಿ ನೈಮ ಸಂಘಟನೆ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವುದರ ಮೂಲಕ ಬಾಂಧವರನ್ನು ಒಗ್ಗೂಡಿಸಿ ಸೌಹಾರ್ದ ಸಂಗಮ ನಿರ್ಮಾಣ ಮಾಡಿದ್ದಾರೆ.
ಶಾಂತಿ ಸಹಬಾಳ್ವೆಯ ಸೌಹಾರ್ದ ಸಂಕೇತದ ಆಚರಣೆಗಳನ್ನು ಮಾಡುವುದರ ಮೂಲಕ ಸಹೋದರತ್ವದೊಂದಿಗೆ ಸಹಬಾಳ್ವೆಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು. ಸಾಮಾಜಿಕ ಕಾರ್ಯಕರ್ತ ನಿಯಾಜ್ ಮಾತನಾಡಿ ನೆಲ್ಯಹುದಿಕೇರಿ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರೋಗ್ಯ, ಶೈಕ್ಷಣಿಕ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಯುವ ಸಮೂಹವನ್ನು ಒಗ್ಗೂಡಿಕೆಯೊಂದಿಗೆ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಹಾಗೂ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಉಪ ನಿರ್ದೇಶಕರಾದ ಝೀವಲ್ ಖಾನ್ ನೈಮ ಸಂಘಟನೆ ಶೈಕ್ಷಣಿಕ ಕಾರ್ಯ ಯೋಜನೆಯ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಡಿಕೇರಿ ತಾಲೂಕು ಪಂಚಾಯಿತಿ ಲೆಕ್ಕ ಸಹಾಯಕ ಅಧಿಕಾರಿ ಉಸೈನ್ ಸಾಬ್ ಮುಲ್ಲಾ, ಡಿಸಿಸಿ ಸದಸ್ಯ ಕೆ.ಎಂ ಬಸೀರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ. ಹಕೀಂ, ನೈಮ ಸಂಘಟನೆ ಅಧ್ಯಕ್ಷ ನೌಷದ್, ಉಪಾಧ್ಯಕ್ಷ ಅಪ್ಸಲ್, ಕಾರ್ಯದರ್ಶಿ ಮುಸ್ತಾಫಾ ಜೊತೆ ಕಾರ್ಯದರ್ಶಿ ಜಂಶೀರ್, ಪಿಡಿಓ ಅಬ್ದುಲ್ಲ, ಸಹಾಯಕ ಪ್ರಾಧ್ಯಾಪಕ ನೌಶಾದ್ ಸಂಘದ ಸದಸ್ಯರು ಸೇರಿದಂತೆ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಓ.ಎಂ. ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಅಶ್ರಫ್ ಹಾಜಿ, ಎ. ಕೆ ಅಬ್ದುಲ್ಲ ಮಣಿ ಮಾಸ್ಟರ್, ಮಸೀದಿ ಸಮಿತಿಯ ಪ್ರಮುಖರು, ವಿವಿಧ ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡಿದ್ದರು.