ನಾಪೋಕ್ಲು, ಮಾ. ೧೬: ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯ ಪೇರೂರು ಗ್ರಾಮದ ಲೈನ್‌ಮನೆಯೊಂದರಲ್ಲಿ ಪತ್ತೆಯಾದ ನವಜಾತ ಶಿಶುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಪೇರೂರು ಗ್ರಾಮದ ತೋಲಂಡ ಪೂಣಚ್ಚ ಅವರಿಗೆ ಸೇರಿದ ಲೈನ್‌ಮನೆಯಲ್ಲಿ ತಾ.೧೫ರ ರಾತ್ರಿ ನವಜಾತ ಹೆಣ್ಣು ಮಗು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಇರುವೆ ಮುತ್ತಿ ರಕ್ತದ ಮಡುವಿನಲ್ಲಿ ಅಳುತ್ತ ನೋವಿನಲ್ಲಿದ್ದ ಮಗುವನ್ನು ರಕ್ಷಿಸಿ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಮಗು ಅಪಾಯದಿಂದ ಪಾರಾಗಿದೆ.
ಮಗುವನ್ನು ಬಿಟ್ಟು ಹೋದವರ ಪತ್ತೆಕಾರ್ಯವೂ ಒಂದೆಡೆ ನಡೆಯುತ್ತಿದ್ದು, ಚಿಕಿತ್ಸೆ ನಂತರ ಮಗುವಿನ ಆರೈಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಕ್ರಮವಹಿಸಲಾಗುತ್ತದೆ. ಮಗುವಿನ ವಾರಿಸುದಾರರ ಬಗ್ಗೆ ಪತ್ತೆ ಕಾರ್ಯ ಪೊಲೀಸರು ಕೈಗೊಂಡಿದ್ದು, ಯಾರಿಗಾದರೂ ಮಾಹಿತಿ ಸಿಕ್ಕಿದ್ದಲ್ಲಿ ೯೪೮೦೮೦೪೯೪೮ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಲು ಪೊಲೀಸ್ ಪ್ರಕಟಣೆ ಕೋರಿದೆ. ಮಾಹಿತಿ ನೀಡಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು ಎಂದು ತಿಳಿಸಿದೆ. - ದುಗ್ಗಳ