*ಗೋಣಿಕೊಪ್ಪಲು, ಮಾ. ೧೬: ತಿತಿಮತಿ ಗ್ರಾಮದ ಕಾಫಿ ತೋಟಗಳಿಗೆ ಕಳೆದ ಕೆಲ ದಿನಗಳಿಂದ ದಾಳಿ ಮಾಡುತ್ತಿರುವ ಕಾಡಾನೆಗಳ ಹಿಂಡು ಬೆಳೆಗಳನ್ನು ಸಂಪೂರ್ಣ ನಾಶ ಮಾಡುತ್ತಿವೆ. ಇದರಿಂದ ಫಸಲಿಗೆ ಬಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ, ತೆಂಗು ಬೆಳೆಗಳು ಸೇರಿದಂತೆ ಅಡಿಕೆ ಗಿಡಗಳು ಕಾಡಾನೆಗಳ ದಾಳಿಗೆ ತುತ್ತಾಗಿದ್ದು, ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ತಿತಿಮತಿ ಗ್ರಾಮದ ಕಾಫಿ ಬೆಳೆಗಾರ ಕೀಕಿರ ವಸಂತ್ ಪೊನ್ನಪ್ಪ ದೂರಿದ್ದಾರೆ.

ಗ್ರಾಮದಂಚಿನ ಕಾಡು ಮತ್ತು ಪಾಳುಬಿಟ್ಟ ಕಾಫಿ ತೋಟಗಳಿಂದ ಬರುತ್ತಿರುವ ಕಾಡಾನೆಗಳು ಈ ಭಾಗದಲ್ಲಿ ರೈತರ ಬೆಳೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಆನೆ ಹಾವಳಿ ತಡೆಗೆ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಒಂದೆಡೆ ಬೆಳೆಗಾರರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳ ಮೂಲಕ ಹೋರಾಡುತ್ತಿದ್ದರೆ, ಮತ್ತೊಂದೆಡೆ ಕಾಡುಪ್ರಾಣಿಗಳಿಂದ ತಮ್ಮ ಬೆಳೆಯನ್ನು ರಕ್ಷಿಸಲು ಪ್ರತಿದಿನ ತಮ್ಮ ಪ್ರಾಣದ ಹಂಗನ್ನು ತೊರೆದು ಕಾವಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ವರ್ಷವಿಡೀ ಕಷ್ಟಪಟ್ಟು ದುಡಿದ ಫಲವಾಗಿ ದೊರೆಯುವ ವಿವಿಧ ಬೆಳೆಗಳ ಫಸಲನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಇದಕ್ಕೆ ಕಾಡಾನೆಗಳ ನಿರಂತರ ಹಾವಳಿಯೇ ಪ್ರಮುಖ ಕಾರಣ ಎಂದು ವಸಂತ್ ಪೊನ್ನಪ್ಪ ಆಪಾದಿಸಿದ್ದಾರೆ.

ತಿತಿಮತಿ-ದೇವರಪುರ ಗ್ರಾಮ ವ್ಯಾಪ್ತಿಗಳಲ್ಲಿ ಬರುವ ಹಲವು ಪ್ರದೇಶಗಳಲ್ಲಿ ಕಳೆದ ಹಲವು ತಿಂಗಳುಗಳಿAದ ಕಾಡಾನೆಗಳ ಹಾವಳಿ ಮಿತಿಮೀರಿದೆ. ೮ ರಿಂದ ೧೨ ಆನೆಗಳಿರುವ ಹಿಂಡು ಕತ್ತಲೆಯಾಗುತ್ತಿದ್ದಂತೆ ತೋಟಗಳಿಗೆ ಲಗ್ಗೆ ಇಡುತ್ತಿದೆ. ಇಲ್ಲಿನ ಬೆಳಗಾರರ ವಿವಿಧ ಬೆಳೆಗಳು ಫಸಲಿಗೆ ಬರುತ್ತಿದ್ದಂತೆಯೇ ಕಾಡಾನೆಗಳ ಹಾವಳಿ ಹೆಚ್ಚಾಗತೊಡಗುತ್ತದೆ. ರಾತ್ರಿ ಸಮಯದಲ್ಲಿ ತೋಟಗಳಿಗೆ ನುಗ್ಗಿ ಫಸಲನ್ನು ನಾಶ ಮಾಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿರುವ ವಸಂತ್ ಪೊನ್ನಪ್ಪ, ಆನೆಗಳು ತೋಟಗಳಿಗೆ ನುಗ್ಗದಂತೆ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಕಾಡಾನೆಗಳ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದರೂ ಇಲ್ಲಿನ ಬೆಳೆಗಾರರ ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮುಂಜಾನೆ ಸಮಯದಲ್ಲಿ ತಮ್ಮ ತೋಟಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು ಫಸಲಿಗೆ ಬಂದ ೧೦೦ಕ್ಕೂ ಹೆಚ್ಚಿನ ಅಡಿಕೆ ಮರವನ್ನು ಧ್ವಂಸಗೊಳಿಸಿದೆ. ಮುಖ್ಯವಾಗಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ತುಳಿದು ತಿಂದು ನಾಶಗೊಳಿಸುವ ಕಾಡಾನೆಗಳ ಈ ದಾಂಧಲೆ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಕಾಡಾನೆಗಳು ಎಷ್ಟೇ ದಾಳಿ ನಡೆಸಿದರೂ ಅರಣ್ಯ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ ಎಂದು ಅವರು ದೂರಿದ್ದಾರೆ. ತಿತಿಮತಿ ವ್ಯಾಪ್ತಿಯ ಜಂಗಲಾಡಿ ಸಮೀಪದ ಕುಂಞÂರಾಮನ ಕಟ್ಟೆ ಎಂಬಲ್ಲಿ ನಿರ್ಮಿಸಲಾಗಿದ್ದ ರೈಲ್ವೆ ಟ್ರ‍್ಯಾಕ್ ಬ್ಯಾರಿಕೇಡ್ ಮುರಿದು ಬಿದ್ದಿದೆ. ಮುರಿದ ಭಾಗದಿಂದ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿದೆ. ಇದನ್ನು ಸರಿಪಡಿಸುವಲ್ಲಿ ಅರಣ್ಯ ಇಲಾಖೆ ವಿಫಲಗೊಂಡಿದೆ. ಮುರಿದ ಭಾಗಕ್ಕೆ ಮರದ ದಿಮ್ಮಿಗಳನ್ನು ಹಾಕಿ ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಕಾಡಾನೆಗಳು ಮರದ ದಿಮ್ಮಿಗಳನ್ನು ಬದಿಗೆ ಸರಿಸಿ ಹೊರಗೆ ಬರುವುದು ದೊಡ್ಡ ಕಷ್ಟದ ಕೆಲಸವೇನಲ್ಲ. ಇದು ಅರಣ್ಯ ಇಲಾಖೆಯ ನಿರ್ಲಕ್ಷö್ಯದ ಪರಮಾವಧಿ ಎಂದು ಸ್ಥಳೀಯ ಕಾಫಿ ಬೆಳೆಗಾರ ಸಿ.ಎ. ಕಾರ್ಯಪ್ಪ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

-ಎನ್.ಎನ್. ದಿನೇಶ್