*ಗೋಣಿಕೊಪ್ಪಲು, ಮಾ. ೧೬: ಅಮ್ಮಕೊಡವ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಒದಗಿಸಿಕೊಡ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್. ಪ್ರಥ್ಯು ಹಾಗೂ ಸಮಾಜದ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜನಾಂಗದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಕಾಳಜಿ ಹೊಂದಿದ್ದು, ಹಂತ ಹಂತವಾಗಿ ವ್ಯವಸ್ಥಿತ ಯೋಜನೆಯನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್. ಪ್ರಥ್ಯು ಕೊಡಗಿ ನಾದ್ಯಂತ ಅಮ್ಮಕೊಡವ ಜನಾಂಗ ವಾಸಿಸುತ್ತಿದ್ದಾರೆ. ಅವರ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಅನುದಾನವನ್ನು ಸರಕಾರ ಒದಗಿಸಿಕೊಡುವ ಮೂಲಕ ಸಹಕಾರ ನೀಡಬೇಕೆಂದು ಮನವಿ ಸಲ್ಲಿಸಿದರು.
ಜೊತೆಗೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಅಮ್ಮಕೊಡವ ಸಮಾಜದ ಬಾಂಧವರು ಶುಭ ಸಮಾರಂಭಗಳನ್ನು ನಡೆಸಲು ಸಣ್ಣ ಕಟ್ಟಡವೊಂದು ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಕಟ್ಟಡದಲ್ಲಿ ಹೆಚ್ಚಿನ ಜನರು ಸಂದಣಿಯಾಗಲು ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಕಟ್ಟಡವನ್ನು ಮೇಲ್ದರ್ಜೆಗೇರಿಸುವ ಚಿಂತನೆ ಸಮಾಜದ ಭಾಂದವರದಾಗಿದೆ.
ಆಡಳಿತ ಮಂಡಳಿಯವರು ಈ ಬಗ್ಗೆ ನಿರ್ಣಯ ಕೈಗೊಂಡು ಈ ಸ್ಥಳದಲ್ಲಿ ಸಭಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಿಕೊಂಡಿದ್ದು, ೨ ಕೋಟಿ ವೆಚ್ಚ ತಗುಲುವ ಅಂದಾಜು ಹೊಂದಲಾಗಿದೆ. ಸರಕಾರ ಸಭಾಂಗಣ ನಿರ್ಮಿಸಲು ೨ ಕೋಟಿ ಅನುದಾನ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಕೊಡಗು ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕಾರ್ಯದರ್ಶಿ ಅನಿಲ್ ಪ್ರಸಾದ್, ಪುತ್ತಮನೆ ಯತೀಶ್, ಸುನೀಲ್, ಹೆಮ್ಮಚ್ಚಿಮನೆ ಅಶಿತ್ ಹಾಗೂ ಇತರರು ಇದ್ದರು.