ಮಡಿಕೇರಿ, ಮಾ. ೧೬: ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಬೇಕಾದರೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ಸಾಮಾಜಿಕ ಜಾಲತಾಣ ಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಖ್ಯಾತ ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಕುಮಾರ್ ಅವರು ಕರೆ ನೀಡಿದ್ದಾರೆ.

೨೦೨೩-೨೪ನೇ ಸಾಲಿನಲ್ಲಿ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತೀ ಹೆಚ್ಚು ಫಲಿತಾಂಶ ಬರಲು ಕಾರಣಕರ್ತರಾದ ಕಾಲೇಜಿನ ಉಪನ್ಯಾಸಕರು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನ ಭಾಷಣ ಮಾಡಿದ ಡಾ. ಬಿ.ಸಿ. ನವೀನ್ ಕುಮಾರ್, ಶಿಕ್ಷಣ ಮತ್ತು ಆರೋಗ್ಯ ದೇಶದ ಸಂಪತ್ತು, ವಿದ್ಯಾರ್ಥಿಗಳು ಓದಿನ ಜೊತೆಗೆ ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚಿಂತಿಸಬೇಕು. ಸಾಮಾಜಿಕ ಜಾಲತಾಣಗಳು ವಿವಿಧ ಸ್ತರಗಳ ವ್ಯಕ್ತಿತ್ವ, ಪ್ರತಿಭೆ ಮತ್ತು ಸೃಜನ ಶೀಲತೆಯನ್ನು ಸಮಾಜಕ್ಕೆ ತೋರಿಸುತ್ತದೆ. ಇಡೀ ವಿಶ್ವ, ದೇಶದಲ್ಲಿ ಏನಾಗುತ್ತಿದೆ ಎಂಬುವುದರ ಕುರಿತು ಅರಿವು ಮೂಡಿಸುತ್ತದೆ. ಸಾಮಾಜಿಕ ಜಾಲತಾಣವನ್ನು ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಬಳಕೆ ಮಾಡಬೇಕು. ಮನುಷ್ಯ ತನ್ನ ಸ್ವಾತಂತ್ರö್ಯ ಕಳೆದುಕೊಂಡರೆ ಮಾನಸಿಕ ಸಮಸ್ಯೆಗೆ ಒಳಗಾಗುತ್ತಾನೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಇತಿಮಿತಿಯೊಳಗೆ ನಮ್ಮ ಏಳಿಗೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣವಂತರಾಗಬೇಕು, ದೇಶದ ಪ್ರಗತಿಗೆ ಅರ್ಥಶಾಸ್ತç, ಇತಿಹಾಸ, ಸಮಾಜಶಾಸ್ತç, ಗಣಿತ ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳು ತಾವು ಓದುವ ವಿಷಯದ ಕುರಿತು ಕೀಳರಿಮೆ ಇಟ್ಟುಕೊಳ್ಳದೆ ಅಭಿಮಾನವನ್ನು ಹೊಂದಬೇಕು. ಅಂತಸ್ತು, ಅಧಿಕಾರ ಯಾವುದೂ ಶಾಶ್ವತ ಅಲ್ಲ, ಉತ್ತಮ ವ್ಯಕ್ತಿತ್ವ ಮಾತ್ರ ಶಾಶ್ವತ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಜ್ಞಾನಕ್ಕಿಂತ ಸಂಪತ್ತು ಮತ್ತೊಂದಿಲ್ಲ, ಅಜ್ಞಾನವನ್ನು ಜ್ಞಾನವಾಗಿ ಪರಿವರ್ತಿಸಿ ಸಂಪತ್ತನ್ನು ಗಳಿಸುವಂತಾಗಬೇಕು, ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ಮುಗಿದ ನಂತರವು ಓದುವುದನ್ನು ಹವ್ಯಾಸವನ್ನಾಗಿ ಪರಿವರ್ತಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ನಿರಂತರ ಅಭ್ಯಾಸ ಮಾಡಿ ಜವಾಬ್ದಾರಿಯುತ ನಾಯಕರಾಗಿ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಬಾರ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಗೌತಮ ಬುದ್ಧರ ಆಶಯಗಳನ್ನು ಮುಂದಿಟ್ಟುಕೊAಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದಲಿತ ಸಂಘರ್ಷ ಸಮಿತಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಮತ್ತಷ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಬಿಇಒ ಕೃಷ್ಣಪ್ಪ, ದ.ಸಂ.ಸಮಿತಿಯ ಕೊಡಗು-ಮೈಸೂರು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಹಾಗೂ ಸಂಚಾಲಕಿ ಪ್ರೇಮ ಕೃಷ್ಣಪ್ಪ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಡಾ. ಮೋಹನ್ ಕುಮಾರ್ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ೨೧ ಉಪನ್ಯಾಸಕರು ಹಾಗೂ ಹೆಚ್ಚು ಅಂಕ ಪಡೆದ ೯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಅತಿಥಿ ಗಣ್ಯರು ಹಾಗೂ ಉಪನ್ಯಾಸಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.