ಕೂಡಿಗೆ, ಮಾ. ೧೬: ಸೋಮವಾರಪೇಟೆ ಅರಣ್ಯ ವಲಯ ಹುದುಗೂರು ಉಪ ವಿಭಾಗಕ್ಕೆ ಸೇರಿದ ಯಡನವಾಡು ಮೀಸಲು ಅರಣ್ಯ ಇಲಾಖೆಗೆ ಸೇರಿದ ವಾಹನ ಹುದುಗೂರು ಯಡನವಾಡು ಮಧ್ಯಭಾಗದ ಬಸವೇಶ್ವರ ದೇವಾಲಯದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಸೇರಿದಂತೆ ೧೨ ಮಂದಿ ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.
ಮಧ್ಯಾಹ್ನ ಕರ್ತವ್ಯ ಮುಗಿಸಿ ಊಟಕ್ಕೆ ಬರುವ ಸಂದರ್ಭದಲ್ಲಿ ವಾಹನ ಬಸವೇಶ್ವರ ದೇವಾಲಯದ ಸಮೀಪದಲ್ಲಿ ಇಳಿಯುವ ಸಂದರ್ಭದಲ್ಲಿ ಪಲ್ಟಿಯಾಗಿ ಅದರಲ್ಲಿದ್ದ ೧೨ ಮಂದಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಕುಶಾಲನಗರ ಸಮುದಾಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚು ಗಾಯಗೊಂಡ ೧೦ ಮಂದಿಯನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಸೇರಿದಂತೆ ಸಿಬ್ಬಂದಿಗಳಾದ ವೆಂಕಟೇಶ, ಸಚಿನ್, ವಿನು, ಸತೀಶ್, ಜೀವನ್, ಗಣೇಶ್, ಸುರೇಶ್, ಶ್ರೀಕಾಂತ್, ಹರೀಶ್ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ, ಬಾಣವಾರ ಮತ್ತು ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.