ಗೋಣಿಕೊಪ್ಪಲು, ಮಾ.೧೬: ಆಟವಾಡ ಲೆಂದು ಕೆರೆಗೆ ಇಳಿದ ಬಾಲಕಿ ಮುಳುಗಿ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ ಸನಿಹದ ಚನ್ನಂಗೊಲ್ಲಿಯಲ್ಲಿ ನಡೆದಿದೆ.
ಚನ್ನಂಗೊಲ್ಲಿ ನಿವಾಸಿ ಪ್ರವೀಣ್ ಹಾಗೂ ಭವಾನಿ ದಂಪತಿ ಪುತ್ರಿ ಲಾವಣ್ಯ (೯) ಮೃತ ಬಾಲಕಿ. ಅಲ್ಲಿನ ಮಿಲ್ ಸಮೀಪದ ಕೆರೆಯ ಬಳಿ ಆಟವಾಡಲೆಂದು ತೆರಳಿದ ವೇಳೆ ದುರ್ಘಟನೆ ಸಂಭವಿಸಿದೆ. ಚನ್ನಂಗೊಲ್ಲಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿ ಯಾಗಿದ್ದ ಲಾವಣ್ಯ ಭಾನುವಾರ ಮಧ್ಯಾಹ್ನ ವೇಳೆ ಸ್ಥಳೀಯ ಮಕ್ಕಳು ಸಮೀಪದ ಕೆರೆಗೆ ಇಳಿದು ಆಟದಲ್ಲಿ ತೊಡಗಿರುವುದನ್ನು ಕಂಡು ಲಾವಣ್ಯ ತನ್ನ ಸ್ನೇಹಿತರೊಂದಿಗೆ ತೆರಳಿ ಕೆರೆಗೆ ಇಳಿದಿದ್ದಾಳೆ. ಈ ವೇಳೆ ಆಳದ ಜಾಗದಲ್ಲಿ ಸಿಲುಕಿಕೊಂಡಿದ್ದಾಳೆ. ಅದಲ್ಲದೆ ಕೆರೆಯಲ್ಲಿ ಹೂಳು ತುಂಬಿದ್ದ ಹಿನ್ನೆಲೆ ಕೆಸರಿನಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗದೇ ಸಾವನ್ನಪ್ಪಿದ್ದಾಳೆ. ಈಕೆಯೊಂದಿಗೆ ಇನ್ನೂ ಇಬ್ಬರು ಮಕ್ಕಳು ನೀರಿನಲ್ಲಿ ಸಿಲುಕಿದ್ದು, ದಡದ ಮೇಲಿದ್ದ ಇತರ ಮಕ್ಕಳು ಪೋಷಕ ರಿಗೆ ಮಾಹಿತಿ ತಿಳಿಸಲು ಓಡಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಘಟನೆ ಕಂಡು ತಕ್ಷಣ ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇಬ್ಬರನ್ನು ರಕ್ಷಿಸಿ ಮೇಲೆತ್ತಬೇಕೆನ್ನುವಷ್ಟರಲ್ಲಿ ಲಾವಣ್ಯ ಕೊನೆಯುಸಿರೆಳೆದಿದ್ದಾಳೆ.
ಗೋಣಿಕೊಪ್ಪ ಪೊಲೀಸ್ ಠಾಣೆಯ ಎಸ್.ಐ. ಪ್ರದೀಪ್ ಕುಮಾರ್ ಹಾಗೂ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ನಂತರ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಾಯಿತು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.