ಮಡಿಕೇರಿ, ಮಾ. ೧೬: ಕೊಡಗು ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಕುಶಾಲನಗರದ ಹಾರಂಗಿ ಕಚೇರಿಯ ಗುತ್ತಿಗೆದಾರ ಭವನದಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಅನುಮೋದನಾ ಸಭಾ ಕಾರ್ಯಕ್ರಮ ನಡೆಯಿತು.
ಈ ಸಭೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿಯ ಪದಾಧಿಕಾರಿಗಳ ಪುನರ್ ಆಯ್ಕೆ ಮಾಡುವುದು ಹಾಗೂ ಸಮನ್ವಯ ಸಮಿತಿಯ ಸದಸ್ಯತ್ವ ನೋಂದಣಿ ಮಾಡಿಸುವುದು ಜಿಲ್ಲಾಮಟ್ಟದ ಮಹಿಳಾ ಘಟಕ ರಚನೆ ಮಾಡುವುದು, ಏಪ್ರಿಲ್ ತಿಂಗಳಲ್ಲಿ ರಾಜ್ಯಮಟ್ಟದ ನೌಕರರ ವಿಚಾರ ಸಂಕೀರ್ಣ ಆಯೋಜನೆ, ಆಯಾ ತಾಲೂಕಿನ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು, ಇದೇ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಹೇಂದ್ರ ಶಿವಮಣಿ, ಜಿಲ್ಲಾ ಗೌರವಾಧ್ಯಕ್ಷರಾಗಿ ವಿಜಯಾನಂದ, ಉಪಾಧ್ಯಕ್ಷರಾಗಿ ರಾಜಕುಮಾರ್ ಮೇಟಿ, ಉಪಾಧ್ಯಕ್ಷರಾಗಿ ರಾಣಿ ರವೀಂದ್ರ, ಪ್ರಧಾನ ಕಾರ್ಯದರ್ಶಿಗಳಾಗಿ ನಂದೀಶ್ ಕುಮಾರ್, ಜಿಲ್ಲಾ ಖಜಾಂಚಿಯಾಗಿ ಮಂಜುನಾಥ್ ಜಿ, ಜಂಟಿ ಕಾರ್ಯದರ್ಶಿಗಳಾಗಿ ರೂಪ ಚೆಂಗಪ್ಪ, ದಿನೇಶ್ ಬಿಎನ್ ಹಾಗೂ ಸಂಘಟನಾ ಕಾರ್ಯದರ್ಶಿಗಳನ್ನು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇತರ ನೌಕರ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಗುರುತಿಸುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್‌ಟಿ ನೌಕರ ಸಮನ್ವಯ ಸಮಿತಿ ಬೆಂಗಳೂರು. ಕೇಂದ್ರ ಸಮಿತಿಯ ರಾಜ್ಯಾಧ್ಯಕ್ಷರಾದ ಡಿ. ಶಿವಶಂಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಅನುಮೋದನೆ ಯೊಂದಿಗೆ ಅಂಗೀಕರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯಾಧ್ಯಕ್ಷರು ಮಾತನಾಡಿ, ಈ ಸಮನ್ವಯ ಸಮಿತಿಯು ರಾಜ್ಯಮಟ್ಟದಲ್ಲಿ ನೊಂದ ನೌಕರರ ಎಲ್ಲಾ ಸಮಸ್ಯೆಗಳಿಗೆ ಸರ್ಕಾರದ ಹಂತದಲ್ಲಿ ಸ್ಪಂದಿಸುವ ಮೂಲಕ ಉತ್ತಮ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ ಸಮಿತಿಯು ರಾಜ್ಯದಲ್ಲಿರುವ ಸಂಘಟನೆಯ ಬೆಳವಣಿಗೆ ಮತ್ತು ಸಂಘಟನೆ ಉಳಿಸಿಕೊಂಡು ಹೋಗಲು ಜಿಲ್ಲಾ ನೌಕರ ಸಮಿತಿ ಪದಾಧಿಕಾರಿಗಳು ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಕುರಿತು ಸಲಹೆ ನೀಡಿದರು. ಕೇಂದ್ರ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.