ಮಡಿಕೇರಿ, ಮಾ. ೧೪ : ರಾಜ್ಯದಲ್ಲಿ ಬಲಿಜ ಸಮಾಜಕ್ಕೆ ಈ ಹಿಂದೆ ೨ಎ ಹಿಂದುಳಿದ ವರ್ಗದಡಿ ಮೀಸಲಾತಿ ದೊರೆಯುತ್ತಿದ್ದು, ಈಗ ೩ಬಿ ವ್ಯಾಪ್ತಿಗೆ ಸೇರಿಸಿ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ತೊಂದರೆಯಾಗಿದ್ದು, ಈ ಮೊದಲು ಇದ್ದಂತೆ ಬಲಿಜ ಸಮಾಜವನ್ನು ೨ಎ ಗೆ ಸೇರಿಸುವಂತಾಗಬೇಕು ಎಂದು ನಿವೃತ್ತ ಅಧಿಕಾರಿ ಗಣೇಶ್ ನಾಯ್ಡು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಲಿಜ ಸಮಾಜವು ಹಿಂದುಳಿದ ವರ್ಗಕ್ಕೆ ಬರಲಿದ್ದು, ಬಳೆ ಮಾರುವುದು ಪ್ರಮುಖ ಕಸುಬಾಗಿದೆ. ಕೈವಾರ ತಾತಯ್ಯ ಅವರ ತತ್ವಗಳು, ಸಂದೇಶಗಳನ್ನು ಯುವ ಜನರು ತಿಳಿದುಕೊಳ್ಳುವಂತಾಗಬೇಕು. ಬಲಿಜರು ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಕೈವಾರ ತಾತಯ್ಯ ಅವರು ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದಾರೆ. ಕಾಲ ಜ್ಞಾನಿಯಾಗಿ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾತನಾಡಿ ರಾಜ್ಯದ ಬಲಿಜ ಮುಖಂಡರು ಹಾಗೂ ಕೊಡಗು ಜಿಲ್ಲೆಯ ಬಲಿಜ ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ಕಾಲಜ್ಞಾನಿ ಯೋಗಿ ನಾರಾಯಣ ಯತೀಂದ್ರರ ೩೦೦ ನೇ ಅದ್ಧೂರಿ ರಥೋತ್ಸವ ಹಮ್ಮಿಕೊಳ್ಳಲಾಗುವುದು ಎಂದರು.

ಬಲಿಜ ಸಮಾಜದ ತಾಲೂಕು ಅಧ್ಯಕ್ಷೆ ಟಿ.ಕೆ. ಮೀನಾಕ್ಷಿ ಕೇಶವ ಮಾತನಾಡಿ ಮಂಗಳ ಸೂತ್ರದಲ್ಲಿ ಕುಂಕುಮ ಅರಿಶಿನ, ಬಳೆ ಪ್ರಮುಖವಾಗಿದ್ದು, ಬಲಿಜ ಜನಾಂಗದವರು ಬಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಪಣ ತೊಡಬೇಕಿದೆ ಎಂದರು.

ಡಿಡಿಪಿಐ ಕಚೇರಿಯ ಉಪ ಯೋಜನಾ ಸಮನ್ವಯಾಧಿಕಾರಿ ಕೃಷ್ಣಪ್ಪ, ಸಮಾಜದ ಪ್ರಮುಖರಾದ ಸುಮಾ ಟಿ.ಎಸ್. ಅವರು ಮಾತನಾಡಿದರು.

ನಾರಾಯಣ ಪೆರಾಜೆ, ಟಿ.ಎಸ್. ಗಾಯತ್ರಿ ಅವರು ಇದೇ ಸಂದರ್ಭ ಕವನ ಹಾಗೂ ಗೀತಾಗಾಯನ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಮಣಜೂರು ಮಂಜುನಾಥ್, ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಇತರರು ಇದ್ದರು.