ನಾಪೋಕ್ಲು, ಮಾ. ೧೫: ಹೊದ್ದೂರು ಗ್ರಾಮದ ತೋಟಗಳಿಗೆ ಕೆಲವರು ಅನಧಿಕೃತವಾಗಿ ಪ್ರವೇಶಿಸಿ ಶೆಡ್ ನಿರ್ಮಿಸಿಕೊಂಡು ಸ್ಥಳೀಯ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ರೈತ ಸಂಘ ಹಾಗೂ ಹೊದ್ದೂರು ರೈತ ಸಂಘದ ವತಿಯಿಂದ ಗ್ರಾಮದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಸಮಸ್ಯೆ ಯನ್ನು ಪರಿಹರಿಸದಿದ್ದಲ್ಲಿ ಬೃಹತ್ ಜಾಥಾ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.
ಹೊದ್ದೂರು ವ್ಯಾಪ್ತಿಯ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರೈತಪರ ಕ್ರಮವಹಿಸುವಂತೆ ಆಗ್ರಹಿಸಿದರು.
ಬೇಡಿಕೆಗಳು
ಕೃಷಿಕರ ಜಮೀನಿನಲ್ಲಿ ಅಕ್ರಮ ವಾಗಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿರುವವನ್ನು ೧೫ ದಿನದೊಳಗೆ ತೆರವುಗೊಳಿಸಬೇಕು, ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ದಾಖಲೆಗಳಿಗಾಗಿ ಗ್ರಾ.ಪಂ. ಕಚೇರಿಗೆ ತೆರಳಿದರೆ ಲಂಚಕ್ಕೆ ಬೇಡಿಕೆ ಯೊಡ್ಡುತ್ತಿದ್ದು, ಅಭಿವೃದ್ಧಿ ಅಧಿಕಾರಿ ಯನ್ನು ಕೂಡಲೇ ವರ್ಗಾಯಿಸಬೇಕು, ತೋಟಕ್ಕೆ ಅಕ್ರಮವಾಗಿ ನುಗ್ಗಿ ಶೆಡ್ ನಿರ್ಮಿಸಿ ಕುಮ್ಮಕ್ಕು ನೀಡುತ್ತಿರುವ ಗ್ರಾ.ಪಂ. ಸದಸ್ಯ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಮೊಣ್ಣಪ್ಪ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕು, ಕೃಷಿಕರಿಗೆ ಆಗುತ್ತಿರುವ ತಾರತಮ್ಯ ನಿವಾರಣೆಯಾಗಬೇಕು, ಗೋಮಾಳಕ್ಕೆ ಜಾಗ ಮಂಜೂರು ಮಾಡಬೇಕು, ರೈತರಿಗೆ ಸೂಕ್ತ ರಸ್ತೆ ನಿರ್ಮಿಸಬೇಕು, ಹೊದ್ದೂರು ಗ್ರಾಮದಲ್ಲಿ ೯ ಕಾಲೋನಿಯಲ್ಲಿ ೨೦೦೦ ಜನರಿದ್ದು, ವಸತಿ ರಹಿತರಿಗೆ ನಿವೇಶನ ಕಾಯ್ದಿರಿಸಬೇಕು, ನಿವೇಶನ ರಹಿತರಿಗೆ ಗೋಮಾಳಕ್ಕೆ ಮೀಸಲಿಟ್ಟ ಜಾಗವನ್ನು ನೀಡಿರುವುದು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಪ್ರತಿಭಟನಾ ನಿರತರು ರೈತರ ಜಮೀನಿಗೆ ನುಗ್ಗಿ ಗೂಂಡಾಗಿರಿ ನಡೆಸಿದವರನ್ನು ೧೫ ದಿನದೊಳಗೆ ತೆರವು ಮಾಡದಿದ್ದಲ್ಲಿ ರೈತರ ಪಿತ್ರಾರ್ಜಿತ ಜಮೀನುಗಳಲ್ಲಿ ಹಾದು ಹೋಗುವ ಎಲ್ಲಾ ಸಾರ್ವಜನಿಕ ರಸ್ತೆಗಳನ್ನು ಸರ್ವೆ ನಡೆಸಿ ಮುಟ್ಟುಗೋಲು ಹಾಕಿಕೊಂಡು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.
ಗಟ್ಟಿಧ್ವನಿ ಮೊಳಗಿಸಿ - ಕೆ.ಜಿ.ಬಿ
ಗ್ರಾಮ ಹಾಗೂ ವಾರ್ಡ್ ಸಭೆಗಳಲ್ಲಿ ರೈತರು ಪಾಲ್ಗೊಂಡು ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ಗಟ್ಟಿಧ್ವನಿ ಮೊಳಗಿಸಬೇಕೆಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ಸಭೆಗಳಲ್ಲಿ ಪಾಲ್ಗೊಂಡು ಹಕ್ಕೊತ್ತಾಯವನ್ನು ಪ್ರಬಲವಾಗಿ ಒಕ್ಕೊರಲಿನಿಂದ ಮಂಡಿಸಬೇಕು. ಹೋರಾಟ ಮಾಡದೆ ಹೋದರೆ ಗ್ರಾಮದಲ್ಲಿ ಅಶಾಂತಿ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾತ್ರೋರಾತ್ರಿ ತೋಟಕ್ಕೆ ಬಂದು ಬೇಲಿ ಹಾಕಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಕಾನೂನು ಕೈಗೆತ್ತಿಕೊಂಡವರಿಗೆ ಸರಿಯಾದ ಉತ್ತರ ನೀಡುವ ಗುಣ ಇರಬೇಕು. ಒಗ್ಗಟ್ಟಿನ ಕೊರತೆ ಇದ್ದು, ಎಲ್ಲರೂ ಒಂದಾದರೆ ಯಾರು ಏನೂ ಮಾಡಲಾಗುವುದಿಲ್ಲ. ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ಎಲ್ಲಿಂದಲೋ ಬಂದು ಕಿರುಕುಳ ನೀಡುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಆರೋಪಿಸಿದರು. ಅತಿಕ್ರಮಣ ಮಾಡಿ ಕೊಂಡಿರುವವರನ್ನು ಮುಲಾಜಿಲ್ಲದೆ ತೆರವುಗೊಳಿಸಿ, ಮೂಲನಿವಾಸಿಗಳಿಗೆ, ಸ್ಥಳೀಯರಿಗೆ ಅಸ್ತಿತ್ವವನ್ನು ಉಳಿಸಿ ಕೊಡಿ ಎಂದು ಈ ಸಂದರ್ಭ ತಹಶೀಲ್ದಾರ್‌ರಲ್ಲಿ ಮನವಿ ಮಾಡಿದರು.
ಸರಕಾರಿ ಜಾಗದಲ್ಲಿ ಕೃಷಿ ಮಾಡುತ್ತಿದ್ದರೆ ಗುತ್ತಿಗೆ ಪಡೆದು ಸಾಗುವಳಿ ನಡೆಸಲು ಅವಕಾಶವಿದೆ. ಇದನ್ನು ಬಳಕೆಮಾಡಿಕೊಳ್ಳಬೇಕು. ಪೌತಿ ಖಾತೆ, ಆರ್.ಟಿ.ಸಿ. ಸಮಸ್ಯೆ ಮೊದಲು ಪರಿಹಾರವಾಗಬೇಕು ಎಂದು ಆಗ್ರಹಿಸಿದರು.
ಬೃಹತ್ ಜಾಥಾ ಕರೆ
ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಏಪ್ರಿಲ್ ೧೫ರೊಳಗೆ ಹೊದ್ದೂರು ಗ್ರಾಮದಲ್ಲಿ ರೈತರ ಬೃಹತ್ ಜಾಥಾ ಹಮ್ಮಿಕೊಳ್ಳ ಲಾಗುವುದು ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಕೆ ನೀಡಿದರು.
ರೈತ ಸಂಘ ಬಡವರ ವಿರುದ್ಧ ಪ್ರತಿಭಟನೆ ಮಾಡುವುದಿಲ್ಲ. ಬಡವರಿಗೆ ನಿವೇಶನ ನೀಡಲಿ ಅದು ಕಾನೂನಾತ್ಮಕ ವಾಗಿರಲಿ. ಇಲ್ಲಿಯೇ ನೀಡಬೇಕೆಂದು ಕೂಡ ಇಲ್ಲ. ಜಾಗ ನೀಡುವ ಮುನ್ನ ಫಲಾನುಭವಿಗಳ ಹಿನ್ನೆಲೆ, ದಾಖಲೆ ಪರಿಶೀಲಿಸಬೇಕು. ಸಂವಿಧಾನ ಅಡಿ, ಕಾನೂನಿನ ಚೌಕಟ್ಟಿನಲ್ಲಿ ಈ ಪ್ರಕ್ರಿಯೆಗಳು ನಡೆಯಬೇಕು ಎಂದರು.
ಹಲವು ವರ್ಷಗಳಿಂದ ಬೆಳೆಸಿದ್ದ ಕಾಫಿ ಗಿಡಗಳನ್ನು ಕಡಿದು ಶೆಡ್ ಹಾಕಿರುವುದು ಎಷ್ಟು ಸರಿ.? ೫-೧೦ ವರ್ಷದಲ್ಲಿ ಹೊರರಾಜ್ಯದ ಕಾರ್ಮಿಕರು ಇಲ್ಲಿ ಹಿಡಿತ ಸಾಧಿಸುತ್ತಾರೆ. ಮುಂದಿನ ದಿನಗಳಲ್ಲಿ ಅವರಿಗೂ ಜಾಗ ನೀಡಬೇಕಾದ ಸ್ಥಿತಿ ಸೃಷ್ಟಿಯಾಗುತ್ತದೆ. ಸ್ಥಳೀಯರು ಬುದ್ಧಿವಂತಿಕೆ, ಕಾನೂನಿನ ಜ್ಞಾನ ಹೊಂದಬೇಕು. ಹೊದ್ದೂರಿನಲ್ಲಿರುವ ಸಮಸ್ಯೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ ವಾಗಿದೆ. ಆಡಳಿತದ ಮೌನವನ್ನು ಸವಾಲಾಗಿ ಸ್ವೀಕರಿಸಿ ಹೋರಾಟ ಮಾಡಲಾಗುವುದು ಎಂದು ಘೋಷಿಸಿದರು.
ರೈತರು ಸಂಘಟಿತರಾಗಿ ಮುಂದೆ ಸಾಗಬೇಕು. ಚರ್ಚೆಯ ಮೂಲಕವೂ ಪರಿಹಾರ ಒದಗಿಸುವ ಕಾರ್ಯವೂ ಒಂದೆಡೆ ಆಗಬೇಕು. ಈ ವಿಷಯದಲ್ಲಿ ತಹಶೀಲ್ದಾರ್ ಪರಾಮರ್ಶೆ ನಡೆಸದಿರುವುದು ಖಂಡನೀಯ. ಪ್ರಕರಣದ ಗಂಭೀರತೆಯನ್ನು ಜಿಲ್ಲಾಧಿಕಾರಿ ಅರಿತು ಕಾರ್ಯೋನ್ಮುಖ ಗೊಳ್ಳಬೇಕು ಎಂದರು.
ಹೊದ್ದೂರು ಗ್ರಾಮದ ರೈತ ಸಂಘದ ಅಧ್ಯಕ್ಷ ಚೌರೀರ ಜಗತ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಅಸ್ತಿತ್ವವನ್ನು ಅಲುಗಾಡಿಸುವ ಕೆಲಸ ನಡೆಯುತ್ತಿದೆ. ಅಧಿಕಾರಿಗಳ ನಿರ್ಲಕ್ಷö್ಯವೇ ಇದಕ್ಕೆ ಕಾರಣವಾಗಿದೆ. ವಿವಿಧ ಹಂತದ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದೇವೆ. ಶೆಡ್ ಹಾಕಿದ ಕೆಲವೇ ದಿನದಲ್ಲಿ ಎಲ್ಲಿಂದಲೋ ಬಂದವರಿಗೆ ಅಗತ್ಯ ಸೌಕರ್ಯ ನೀಡಲಾಗಿದೆ. ಕೆಲವರು ಇದನ್ನು ದಂಧೆಯಾಗಿ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನಂತರ ತಹಶೀಲ್ದಾರ್ ಪ್ರವೀಣ್, ಅವರಿಗೆ ಮನವಿ ಪತ್ರವನ್ನು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.
ಈ ಸಂದರ್ಭ ಬೇಡಿಕೆಗಳ ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ತಹಶೀಲ್ದಾರ್ ಪ್ರವೀಣ್ ಅವರು, ಹೀಗಾಗಲೇ ಅಕ್ರಮವಾಗಿ ಕಾಫಿ ತೋಟಗಳಲ್ಲಿ ಶೆಡ್ಡ್ ಹಾಕಿ ಕುಳಿತಿರುವ ಜಾಗದ ಬಗ್ಗೆ ಭೂವಿಜ್ಞಾನಿ ಗಳಿಂದ ಮಾಹಿತಿ ಸಂಗ್ರಹಿಸಿದ್ದು, ಈ ಜಾಗ ವಾಸಕ್ಕೆ ಸೂಕ್ತವಲ್ಲವೆಂದು ತಿಳಿದುಬಂದಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ಅಲ್ಲಿ ನಿವೇಶನ ನೀಡಲು ಸಾಧ್ಯವಿಲ್ಲವೆಂದರಲ್ಲದೆ, ಕಾನೂನಿನಡಿಯಲ್ಲಿ ಮುಂದಿನ ೧೫ ದಿನಗಳೊಗಾಗಿ ಅತಿಕ್ರಮಣ ಗೊಂಡವನ್ನು ತೆರವುಗೊಳಿಸ ಲಾಗುವುದಲ್ಲದೆ ರೈತರಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದೆಂದರು. ಈ ಸಂದರ್ಭ ಕಂದಾಯಾಧಿಕಾರಿ ಚಂದ್ರ, ಗ್ರಾಮ ಲೆಕ್ಕಿಗರಾದ ಸಂತೋಷ್ ಪಾಟೀಲ್, ಹೊದ್ದೂರು ಗ್ರಾ.ಪಂ. ಅಧ್ಯಕ್ಷ ಹೆಚ್.ಎ. ಹಂಸ, ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅವರು ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯಲ್ಲಿ ಮಡಿಕೇರಿ ತಾ.ಪಂ. ಮಾಜಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ಟಿಮಾಡ ಸುಜಯ್ ಬೋಪಯ್ಯ, ಜಿಲ್ಲಾ ಕಾರ್ಯದರ್ಶಿ ಚೆಪ್ಪುಡಿರ ಕಾರ್ಯಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಸೋಮವಾರಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ದಿನೇಶ್, ವೀರಾಜಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಭವಿಕುಮಾರ್, ಸ್ಥಳೀಯ ಕಾಫಿ ಬೆಳೆಗಾರರಾದ ಬಡುವಂಡ ದೇವಿ ಸುಬ್ರಮಣಿ, ಚೆಟ್ಟಿಮಾಡ ವಸಂತ ಕಾರ್ಯಪ್ಪ, ಕೂಡಂಡ ರಾಜೇಂದ್ರ ಅಯ್ಯಮ್ಮ, ಗ್ರಾಮ ರೈತ ಸಂಘ ಕಾರ್ಯಾಧ್ಯಕ್ಷ ಪಟ್ರಕೋಡಿ ವಾಸುದೇವ್, ಕಾರ್ಯದರ್ಶಿ ಚೆಟ್ಟಿಮಾಡ ಸುನಿ ಲಕ್ಷö್ಮಣ್, ಪದಾಧಿಕಾರಿಗಳಾದ ಮೇಕಂಡ ಸುನಿಲ್ ಮಾದಪ್ಪ, ಚೆಟ್ಟಿಮಾಡ ಲೋಕೇಶ್, ಚೌರೀರ ಸೋಮಣ್ಣ, ಚೌರೀರ ನಿಕನ್, ಅಮ್ಮಣಂಡ ಯು. ಪೂಣಚ್ಚ, ಚೆಟ್ಟಿಮಾಡ ಪ್ರವೀಣ್, ಕೋರನ ರವಿ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಕಾಫಿ ಬೆಳೆಗಾರ ಚೌರೀರ ರಮೇಶ್ ಕಾವೇರಪ್ಪ ಪ್ರಾರ್ಥಿಸಿದರು. ನಿವೃತ್ತ ಮುಖ್ಯಶಿಕ್ಷಕ ಚೌರೀರ ಉದಯ ಪ್ರಾಸ್ತವಿಕ ನುಡಿಯಾಡಿದರು. ಕೂಡಂಡ ಸಾಬ ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಅಧಿಕ ಸಂಖ್ಯೆಯಯಲ್ಲಿ ರೈತರು ಸಭೆಯಲ್ಲಿ ಭಾಗವಹಿಸಿ ತಾವು ಅನುಭವಿಸುತ್ತಿರುವ ನೋವುಗಳನ್ನು ತೋಡಿಕೊಂಡರು. ಮಡಿಕೇರಿ ತಾಲೂಕು ವೃತನಿರೀಕ್ಷಕ ಚಂದ್ರಶೇಖರ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.