ಸೋಮವಾರಪೇಟೆ, ಮಾ.೧೪ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೨೦೨೫-೨೬ನೇ ಸಾಲಿನ ಕುರಿ, ಕೋಳಿ, ಹಸಿಮೀನು, ಹಂದಿ ಮಾಂಸದ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣದ ಶುಲ್ಕ ಮತ್ತು ಸಂತೆ ಸುಂಕ ಎತ್ತಾವಳಿ ಹರಾಜು ಪ್ರಕ್ರಿಯೆ ಪಂಚಾಯಿತಿ ಸಭಾಂಗಣದಲ್ಲಿ ನಡೆದು, ಒಟ್ಟಾರೆ ೯೮ ಸಾವಿರ ಲಾಭ ಗಳಿಸಿತು.
ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಹರಾಜಿನಲ್ಲಿ ಎಲ್ಲಾ ಮಳಿಗೆ, ಸುಂಕ ಎತ್ತಾವಳಿ ಹಕ್ಕು ಒಟ್ಟು ರೂ. ೨೨.೪೫ ಲಕ್ಷಕ್ಕೆ ಹರಾಜಾಗುವ ಮೂಲಕ, ಕಳೆದ ಸಾಲಿಗಿಂತ ರೂ. ೯೭ ಸಾವಿರ ಪಂಚಾಯಿತಿಗೆ ಲಾಭವಾಯಿತು. ಕೋಳಿ ಮಾಂಸದ ಮಾರುಕಟ್ಟೆ ಕಳೆದ ಸಾಲಿನಲ್ಲಿ ರೂ. ೫,೧೨,೦೦೦ಕ್ಕೆ ಹರಾಜಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ರೂ. ೫,೮೬,೦೦೦ ಕ್ಕೆ ಹರಾಜಾಗುವ ಮೂಲಕ ರೂ. ೭೪,೦೦೦ ಹೆಚ್ಚುವರಿ ಪಟ್ಟಣ ಪಂಚಾಯಿತಿಗೆ ಲಾಭವಾಗಿದೆ.
ಕುರಿ ಮಾಂಸದ ಮಾರುಕಟ್ಟೆ ಕಳೆದ ಸಾಲಿನಲ್ಲಿ ರೂ. ೨,೨೧,೦೦೦ಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. ೨,೩೧,೦೦೦ಕ್ಕೆ ಹರಾಜಾಗುವ ಮೂಲಕ ಪಂಚಾಯಿತಿಗೆ ಹೆಚ್ಚುವರಿ ರೂ. ೧೦,೦೦೦ ಲಾಭವಾಯಿತು. ಹಸಿ ಮೀನು ಮಾರುಕಟ್ಟೆ ಕಳೆದ ಸಾಲಿನಲ್ಲಿ ರೂ. ೪,೨೦,೦೦೦ಕ್ಕೆ ಹಾರಾಜಾಗಿದ್ದು, ಈ ಸಾಲಿನಲ್ಲಿ ರೂ. ೪,೨೬,೦೦೦ಕ್ಕೆ ಹರಾಜಾಗುವ ಮೂಲಕ ರೂ. ೬೦೦೦ ಲಾಭ ಪಡೆಯಿತು.
ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಕಳೆದ ಸಾಲಿನಲ್ಲಿ ರೂ. ೯,೪೫,೦೦೦ಕ್ಕೆ ಹರಾಜಾಗಿದ್ದು, ಪ್ರಸಕ್ತ ಸಾಲಿನಲ್ಲಿ ರೂ. ೯,೫೦,೦೦೦ಕ್ಕೆ ಹರಾಜಾಗುವ ಮೂಲಕ ರೂ. ೫,೦೦೦ ಹಾಗೂ, ಬಸ್ ನಿಲ್ದಾಣದ ಸುಂಕ ಎತ್ತಾವಳಿ ಹರಾಜಿನಲ್ಲಿ ಕಳೆದ ಸಾಲಿನಲ್ಲಿ ರೂ. ೫೦,೦೦೦ಕ್ಕೆ ಹರಾಜಾಗಿದ್ದು, ಪ್ರಸಕ್ತ ರೂ. ೫೨,೦೦೦ಕ್ಕೆ ಹರಾಜಾಗಿ ರೂ. ೨೦೦೦ ಹೆಚ್ಚುವರಿ ಲಾಭವಾಗಿದೆ. ಹಂದಿ ಮಾಂಸದ ಮಾರುಕಟ್ಟೆಗೆ ಸೂಕ್ತ ದರ ಸಿಗದ ಹಿನ್ನೆಲೆಯಲ್ಲಿ ಹರಾಜನ್ನು ಮುಂದೂಡಲಾಯಿತು.
ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಪಂಚಾಯಿತಿ ಸದಸ್ಯರಾದ ಬಿ.ಸಂಜೀವ, ಶೀಲಾ ಡಿಸೋಜಾ, ಚಂದ್ರು, ಶುಭಾಕರ, ಮೃತ್ಯುಂಜಯ, ನಾಮನಿರ್ದೇಶಿತ ಸದಸ್ಯರಾದ ಹೆಚ್.ಎ. ನಾಗರಾಜು, ವಿನಿ, ಡಿ.ಎಂ. ಕಿರಣ್ ಹಾಗೂ ಮುಖ್ಯಾಧಿಕಾರಿ ಸತೀಶ್, ಕಂದಾಯ ಇಲಾಖೆಯ ಜೀವನ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ರೂಪಾ ಇದ್ದರು.