g ಹೆಚ್.ಜೆ. ರಾಕೇಶ್

ಮಡಿಕೇರಿ, ಮಾ. ೧೪: ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆಯ ಚುಕ್ಕಾಣಿ ಹಿಡಿಯಲು ತೆರೆಮರೆ ಕಸರತ್ತು ತೀವ್ರಗೊಂಡಿದ್ದು, ಮಹಿಳಾ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಪಡೆಯಲು ಅಧಿಸೂಚನೆ ಹೊರಬೀಳುವ ಮುನ್ನವೇ ಪೈಪೋಟಿ ತೀವ್ರಗೊಳಿಸಿರುವುದು ಕಂಡುಬರುತ್ತಿದೆ.

ಮೊದಲ ಅವಧಿಯ ಅಧ್ಯಕ್ಷರಾಗಿ ನೆರವಂಡ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷರಾಗಿ ಸವಿತಾ ರಾಕೇಶ್ ಕಾರ್ಯನಿರ್ವಹಿಸಿ ತಮ್ಮ ಎರಡೂವರೆ ವರ್ಷದ ಆಡಳಿತ ಅವಧಿಯನ್ನು ೨೦೨೪ರ ಏಪ್ರಿಲ್‌ನಲ್ಲಿ ಪೂರ್ಣಗೊಳಿಸಿದ್ದರು. ಮುಂದಿನ ಎರಡೂವರೆ ವರ್ಷದ ಅವಧಿಗೆ ಚುನಾವಣಾ ಆಯೋಗ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಘೋಷಿಸಿತ್ತು.

ಕಳೆದ ೩ ಅವಧಿಗಳಿಂದ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟಗೊಂಡ ಹಿನ್ನೆಲೆ ಬಿಜೆಪಿಯ ಸದಸ್ಯ ಅರುಣ್ ಶೆಟ್ಟಿ ಬೇಸರಗೊಂಡು ಪುರುಷರಿಗೆ ಸ್ಥಾನ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಿ ಮೀಸಲಾತಿ ಬದಲಿಸಲು ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು.

ಪರಿಣಾಮ ಪ್ರಕಟಗೊಂಡಿದ್ದ ಮೀಸಲಾತಿ ತಡೆಹಿಡಿಯಲ್ಪಟ್ಟಿತ್ತು. ನಂತರ ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಾಗಿ ನೇಮಕಗೊಂಡರು. ಅರುಣ್ ಶೆಟ್ಟಿ ತಾವು ಸಲ್ಲಿಸಿದ್ದ ಅರ್ಜಿ ಹಿಂಪಡೆದರು. ನಂದಕುಮಾರ್ ಅವರು ಸಲ್ಲಿಕೆ ಮಾಡಿದ್ದ ಅರ್ಜಿ ರದ್ದಾಗಿ ಹಿಂದಿನ ಮೀಸಲಾತಿಯ ಯಥಾಸ್ಥಿತಿಯನ್ನು ಕೋರ್ಟ್ ಎತ್ತಿಹಿಡಿಯಿತು. ಇವೆಲ್ಲ ವಿದ್ಯಮಾನಗಳಿಂದ ೧೧ ತಿಂಗಳು ವರಿಷ್ಠರಿಲ್ಲದೆ ನಗರಸಭೆ ಆಡಳಿತ ಮುಂದುವರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅಧಿಸೂಚನೆಗಾಗಿ ಕಾಯುವಿಕೆ

ಮೀಸಲಾತಿ ಬದಲಾವಣೆಗೆ ನ್ಯಾಯಾಂಗದ

(ಮೊದಲ ಪುಟದಿಂದ) ಮೂಲಕ ನಡೆಸಿದ ಪ್ರಯತ್ನಗಳು ವಿಫಲಗೊಂಡು ಮೊದಲು ಘೋಷಣೆಯಾಗಿದ್ದ ಮೀಸಲಾತಿಯೇ ಪ್ರಕಟಗೊಂಡ ಹಿನ್ನೆಲೆ ಚುನಾವಣಾ ಅಧಿಸೂಚನೆ ಪ್ರಕಟವಾಗುವುದರತ್ತ ಸದಸ್ಯರು ಚಿತ್ತ ಹರಿಸಿದ್ದಾರೆ. ಈಗಾಗಲೇ ಬಿಜೆಪಿ ಸದಸ್ಯರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಅಧಿಸೂಚನೆ ಕುರಿತು ಚರ್ಚೆಯೂ ನಡೆಸಿದ್ದಾರೆ. ಇತ್ತೀಚೆಗೆ ನಡೆದ ನಗರಸಭೆಯ ಬಜೆಟ್ ಸಭೆಯಲ್ಲೂ ಜಿಲ್ಲಾಧಿಕಾರಿಯ ಗಮನವನ್ನು ಸದಸ್ಯರು ಸೆಳೆದಿದ್ದರು.

ಮಹಿಳೆಯರ ಪೈಪೋಟಿ

೨೩ ಸ್ಥಾನ ಹೊಂದಿರುವ ಮಡಿಕೇರಿ ನಗರಸಭೆಯಲ್ಲಿ ೧೬ ಸ್ಥಾನಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಈ ಪೈಕಿ ೯ ಮಹಿಳಾ ಜನಪ್ರತಿನಿಧಿಗಳಿದ್ದಾರೆ. ಅಧ್ಯಕ್ಷ ಸ್ಥಾನ ಪಡೆಯಲು ಸಹಜವಾಗಿ ೯ ಮಂದಿಯೂ ಆರ್ಹರಾಗಿದ್ದು, ಇದರಲ್ಲಿ ಕೆಲವರು ಅಧ್ಯಕ್ಷ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದ್ದಾರೆ.

ಬಿ.ಪಿ. ಚಿತ್ರಾವತಿ, ಸವಿತಾ ರಾಕೇಶ್, ಪಿ. ಕಲಾವತಿ, ಸಿ.ಕೆ. ಮಂಜುಳಾ, ಕೆ. ಉಷಾ, ನೆರವಂಡ ಅನಿತಾ ಪೂವಯ್ಯ, ಕುಟ್ಟನ ಶ್ವೇತಾ ಪ್ರಶಾಂತ್, ಬಾಳೆಯಡ ಸಬೀತ, ಹೆಚ್.ಎನ್. ಶಾರದಾ ಅವರುಗಳು ಕಮಲ ಪಾಳಯದಲ್ಲಿರುವ ಮಹಿಳಾ ಸದಸ್ಯರಾಗಿದ್ದು, ಇವರಲ್ಲಿ ಶ್ವೇತಾ, ಸಬಿತ, ಉಷಾ, ಅನಿತಾ ಪೂವಯ್ಯ, ಸವಿತಾ ಅವರುಗಳು ಅಧ್ಯಕ್ಷ ಸ್ಥಾನ ಪಡೆಯುವ ಆತ್ಮವಿಶ್ವಾಸದಲ್ಲಿದ್ದಾರೆ.

ಅನಿತಾ ಪೂವಯ್ಯ ಈಗಾಗಲೇ ಒಂದು ಅವಧಿಯ ಅಧ್ಯಕ್ಷ ಸ್ಥಾನ ಪೂರೈಸಿದ್ದು, ‘ಸವಿತಾ ರಾಕೇಶ್‌ಗೆ ಸ್ಥಾನ ನೀಡಿದರೆ ತನಗೂ ನೀಡುವಂತೆ’ ಬೇಡಿಕೆ ಮುಂದಿಟ್ಟಿರುವುದಾಗಿ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ಆದರೆ, ಅನಿತಾ ಪೂವಯ್ಯ ಅಧ್ಯಕ್ಷೆಯಾಗಿ ಒಂದು ಅವಧಿ ಪೂರೈಸಿರುವುದರೊಂದಿಗೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿರುವ ಕಾರಣ ಅವರನ್ನು ಮನವೊಲಿಸಿ ಕಣದಿಂದ ಹಿಂದೆ ಸರಿಸುವ ಲಕ್ಷಣಗಳು ಗೋಚರವಾಗುತ್ತಿವೆ.

ಆಪ್ತ ಸ್ನೇಹಿತರಾಗಿರುವ ಶ್ವೇತಾ ಪ್ರಶಾಂತ್, ಸಬಿತ ಕೂಡ ಆಕಾಂಕ್ಷಿಗಳಲ್ಲಿ ಮುನ್ನಲೆಯಲ್ಲಿದ್ದು, ಸ್ಥಾನ ಪಡೆಯುವ ನಿಟ್ಟಿನಲ್ಲಿ ಇಬ್ಬರು ಚಟುವಟಿಕೆ ನಡೆಸುತ್ತಿರುವುದು ಗಮನಾರ್ಹವಾಗಿದೆ. ಇನ್ನು ಉಷಾ ಕಾವೇರಪ್ಪ ಕೂಡ ತಮ್ಮದೇ ಆದ ಪ್ರಯತ್ನದಲ್ಲಿದ್ದು, ಅವರ ಪತಿ ಕಾವೇರಪ್ಪ ಪಕ್ಷದ ಗಮನ ಸೆಳೆದು ಸ್ಥಾನ ಪಡೆಯುವತ್ತ ಚಿತ್ತ ಹರಿಸಿದ್ದಾರೆ. ಉಪಾಧ್ಯಕ್ಷೆಯಾಗಿದ್ದ ಸವಿತಾ ರಾಕೇಶ್ ಕೂಡ ತನ್ನ ಪ್ರಭಾವವನ್ನು ಬಳಸಿ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಪಕ್ಷದಲ್ಲಿ ಹಿರಿತನ ಹೊಂದಿರುವ ಶಾರದಾ ನಾಗರಾಜ್ ಕೂಡ ಮುಂದಿನ ದಿನಗಳಲ್ಲಿ ಆಕಾಂಕ್ಷಿಯಾಗಿ ಹೊರಹೊಮ್ಮುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಜಾತಿ ಲೆಕ್ಕಾಚಾರ!

ನಗರಸಭೆ ಆತಂರಿಕ ಚುನಾವಣೆಯಾದರೂ ಪ್ರತಿಷ್ಠೆಯ ಕಣವಾಗಿದೆ. ಜಿಲ್ಲೆಯ ಏಕೈಕ ನಗರಸಭೆ ಇದಾಗಿರುವುದರಿಂದ ಪಕ್ಷದ ವಲಯದಲ್ಲಿ ಹಾಗೂ ಸಮಾಜದಲ್ಲೂ ಹೆಗ್ಗುರುತು ಸಾಧಿಸಲು ಇದು ವೇದಿಕೆಯಾಗುವುದರಿಂದ ಆಕಾಂಕ್ಷಿಗಳು ನಿರ್ಲಕ್ಷö್ಯ ತೋರದೆ ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಜಾತಿ ಲೆಕ್ಕಾಚಾರ ಜೋರಾಗಿದೆ.

ಕಳೆದ ಅವಧಿಯ ಅಧ್ಯಕ್ಷ ಸ್ಥಾನವನ್ನು ಕೊಡವ ಸಮುದಾಯದ ನೆರವಂಡ ಅನಿತಾ ಪೂವಯ್ಯರಿಗೆ ನೀಡಿದ ಹಿನ್ನೆಲೆ ಈ ಬಾರಿ ಕೊಡವೇತರರಿಗೆ ಅದರಲ್ಲೂ ಗೌಡ ಸಮುದಾಯಕ್ಕೆ ಸೇರಿದ ಸದಸ್ಯೆಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕೆಲ ಸದಸ್ಯರು, ನಾಯಕರು ಒತ್ತಾಯಿಸುತ್ತಿದ್ದಾರೆ.

ಇದನ್ನು ಗಮನಿಸಿದಾಗ ಆಕಾಂಕ್ಷಿಗಳ ಪೈಕಿ ಅರೆಭಾಷೆ ಗೌಡ ಸಮುದಾಯದ ಶ್ವೇತಾ ಅವರು ಅರ್ಹತೆ ಹೊಂದಿದ್ದಾರೆ. ಆದರೆ, ಶ್ವೇತಾ ಕುರಿತು ಸದಸ್ಯರೊಳಗೆ, ಪಕ್ಷದ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಯೊಂದಿಗೆ ಕಳೆದ ಲೋಕಸಭಾ ಚುನಾವಣೆ ಸಂದರ್ಭ ಪಕ್ಷದ ನಾಯಕರೊಬ್ಬರೊಂದಿಗೆ ನಡೆದ ‘ಫೈಟ್’ ವಿರೋಧಕ್ಕೂ ಎಡೆ ಮಾಡಿಕೊಟ್ಟಿದೆ. ಇದನ್ನು ‘ಪಾಸಿಟಿವ್’ ಆಗಿ ಪರಿವರ್ತಿಸುವತ್ತವೂ ಅವರು ಮಗ್ನರಾಗಿದ್ದಾರೆ. ಆಕಾಂಕ್ಷಿಗಳೆಲ್ಲರು ಇತರ ಸದಸ್ಯರನ್ನು ಸಂಪರ್ಕಿಸುವುದರಲ್ಲಿ ನಿರತರಾಗಿ ಬೆಂಬಲವನ್ನು ಪಡೆಯುವತ್ತ ತಂತ್ರಗಾರಿಕೆ ಮಾಡುತ್ತಿರುವುದು ತಿಳಿದು ಬರುತ್ತಿದೆ.

ಕಮಲ ಪಾತ್ರ ಪ್ರಧಾನ - ವಿಪಕ್ಷಗಳನ್ನು ದೂರವಿಡುವಂತಿಲ್ಲ ಕಾಂಗ್ರೆಸ್, ಜೆಡಿಎಸ್ ತಲಾ ಒಂದು, ಎಸ್.ಡಿ.ಪಿ.ಐ. ೫ ಸ್ಥಾನದಿಂದ ವಿಪಕ್ಷ ಸ್ಥಾನದಲ್ಲಿದ್ದರೂ ಬಿಜೆಪಿ ೧೬ ಸದಸ್ಯರನ್ನು ಹೊಂದಿ ಸ್ಪಷ್ಟಬಹುಮತ ಇರುವ ಹಿನ್ನೆಲೆ ಸ್ವಪಕ್ಷೀಯರ ಬೆಂಬಲ ಬಹುಮುಖ್ಯ ಪಾತ್ರ ವಹಿಸುತ್ತದೆ.

ಆಕಾಂಕ್ಷಿಗಳ ಪೈಕಿ ಯಾರಾದರೂ ಒಬ್ಬರು ನಿರಾಶರಾಗಿ ಬಂಡಾಯವೆದ್ದು ಚುನಾವಣೆ ನಡೆಯಲೆಂದು ಸ್ಪರ್ಧಾ ಕಣಕ್ಕಿಳಿದರೆ ಬಿಜೆಪಿಯೊಳಗೆ ಕೆಲ ಮಂದಿಯೊAದಿಗೆ ಎಸ್.ಡಿ.ಪಿ.ಐ., ಕಾಂಗ್ರೆಸ್, ಜೆಡಿಎಸ್‌ನ ಎಲ್ಲಾ ಸದಸ್ಯರನ್ನು ಸೆಳೆದು ತಿರುವು ಮೂಡಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

ನಾಯಕರ ಮೊರೆ-ಉಪಾಧ್ಯಕ್ಷ ಸ್ಥಾನ ಯಾರಿಗೆ?

ಆಕಾಂಕ್ಷಿಗಳು ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸಿ ಬೆಂಬಲದ ಮೊರೆ ಹೋಗುತ್ತಿದ್ದಾರೆ. ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳನ್ನು ಒಲಿಸಿಕೊಂಡು ಸ್ಥಾನ ಪಡೆಯುವ ಕಸರತ್ತು ತೀವ್ರವಾಗಿದೆ. ಜಾತಿ ಲೆಕ್ಕಾಚಾರದ ದಾಳವನ್ನು ಹಾಕುತ್ತಿರುವುದರಿಂದ ಆಯಾ ಜನಾಂಗದ ಮುಖಂಡರನ್ನು ಮನವೊಲಿಸಿ ಹೆಸರು ಅಂತಿಮಗೊಳಿಸುವತ್ತವೂ ಪ್ರಯತ್ನಗಳು ಸಾಗುತ್ತಿವೆ.

ಇವೆಲ್ಲದರ ನಡುವೆ ಉಪಾಧ್ಯಕ್ಷ ಸ್ಥಾನದ ಕುತೂಹಲ ಎದ್ದಿದೆ. ಅಧ್ಯಕ್ಷ ಸ್ಥಾನ ವಂಚಿತರಾದವರಲ್ಲಿ ಒಬ್ಬರಿಗೆ ಉಪಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆ ಅಧಿಕವಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಹಿನ್ನೆಲೆ ಬಿಜೆಪಿಯಲ್ಲಿರುವ ಎಲ್ಲಾ ೧೬ ಸದಸ್ಯರು ಅರ್ಹರಾಗಿದ್ದಾರೆ. ಪುರುಷ ಸದಸ್ಯರು ಉಪಾಧ್ಯಕ್ಷ ಸ್ಥಾನದ ಬಗ್ಗೆ ತಲೆಕೆಡಿಸಿಕೊಂಡAತೆ ಕಾಣುತ್ತಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಹೆಚ್ಚಿನ ಆಸಕ್ತಿ ಇರುವುದು ಕಂಡುಬರುತ್ತಿದೆ. ಬಹುತೇಕ ಮಹಿಳೆಯರೇ ಈ ಬಾರಿಯೂ ಉಪಾಧ್ಯಕ್ಷ ಸ್ಥಾನ ಪಡೆಯುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಏಪ್ರಿಲ್‌ನಲ್ಲಿ ಪ್ರಕ್ರಿಯೆ?

ಲೋಕಸಭಾ ಚುನಾವಣಾ ನೀತಿ ಸಂಹಿತೆ, ನ್ಯಾಯಾಂಗ ಹೋರಾಟ ಹೀಗೆ ಹಲವು ವಿಘ್ನದೊಂದಿಗೆ ಗದ್ದಿಗೆ ಏರಲು ಎದುರಾಗಿದ್ದ ತೊಡಕುಗಳು ನಿವಾರಣೆಯ ಹಂತದಲ್ಲಿದ್ದು, ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಯುವ ವಿಶ್ವಾಸ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಕೆಲ ಸದಸ್ಯರು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಶೀಘ್ರ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಸಕಾರಾತ್ಮಕ ಸ್ಪಂದನ ನೀಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.