ವೀರಾಜಪೇಟೆ, ಮಾ. ೧೫: ಇಲ್ಲಿಗೆ ಸಮೀಪದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರಂಬಾಡಿಯಲ್ಲಿರುವ ವೀರಾಜಪೇಟೆ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆAಕಿ ಹೊತ್ತಿ ಉರಿಯುತ್ತಿದ್ದನ್ನು ಕಂಡು ಸ್ಥಳೀಯ ಮೊರಾರ್ಜಿ ವಸತಿ ಶಾಲೆಯ ಸಿಬ್ಬಂದಿ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಗೋಣಿಕೊಪ್ಪದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ಪುರಸಭೆಯ ನೀರು ಪೂರೈಸುವ ವಾಹನದ ಮೂಲಕ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಂತೆ ಗೋಣಿಕೊಪ್ಪದಿಂದ ಅಗ್ನಿಶಾಮಕದಳ ಆಗಮಿಸಿ ಜಲಫಿರಂಗಿ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಸಿತು. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ದಟ್ಟ ಹೊಗೆ ಆವರಿಸಿದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕು ಉಂಟಾಯಿತು.
ಈ ಸಂದರ್ಭ ಪುರಸಭೆಯ ಪುರಸಭೆಯ ಅಭಿಯಂತರ ರೀತ್ ಸಿಂಗ್, ಆರೋಗ್ಯ ನಿರೀಕ್ಷಕಿ ಕೋಮಲ. ಪುರಸಭೆ ಸದಸ್ಯ ಪಟ್ಟಡ ರಂಜಿ ಪೂಣಚ್ಚ, ಆರ್ಜಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್. ಪಿ.ಕೆ, ಕಾರ್ಯದರ್ಶಿ ರಾಜ.ಆರ್. ಹಾಗೂ ಪುರಸಭೆಯ ಪೌರ ಕಾರ್ಮಿಕರು ಹಾಜರಿದ್ದರು.