ಸಿದ್ದಾಪುರ, ಮಾ. ೧೨: ಕ್ಷುಲ್ಲಕ ವಿಚಾರಕ್ಕೆ ಕಾರ್ಮಿಕರ ನಡುವೆ ಹೊಡೆದಾಟ ನಡೆದು ಓರ್ವ ಸಾವನ್ನಪ್ಪಿದ ಘಟನೆ ಪಾಲಿಬೆಟ್ಟದ ಖಾಸಗಿ ಸಂಸ್ಥೆಯ ಕಾಫಿ ತೋಟದ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಚೆನ್ನಯ್ಯನಕೋಟೆಯ ಗ್ರೋವ್ ಕಾಫಿ ತೋಟದಲ್ಲಿ ಕಾರ್ಮಿಕರಾಗಿರುವ ಪಂಜರಿ ಎರವರ ಚಾಮ (೫೨) ಹಾಗೂ ಜೇನು ಕುರುಬರ ರಘು ಮಂಗಳವಾರ ರಾತ್ರಿ ಪಾಲಿಬೆಟ್ಟ ಪಟ್ಟಣಕ್ಕೆ ತೆರಳಿ ಬಾಳೆಗೊನೆ ಮಾರಾಟ ಮಾಡಿ ಅದೇ ಹಣದಲ್ಲಿ ಮದ್ಯಪಾನ ಮಾಡಿ ಲೈನ್ಮನೆಗೆ ಬರುತ್ತಿದ್ದ ಸಂದರ್ಭ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಚಾಮ ದೊಣ್ಣೆಯಿಂದ ರಘು (೪೫)ವಿನ ಮೇಲೆ ಹಲ್ಲೆ ನಡೆಸಿದ ಪರಿಣಾಮ ರಘುವಿನ ತಲೆ ಹಾಗೂ ಬೆನ್ನಿಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ. ರಘು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಬೆಳಗ್ಗಿನ ಜಾವ ರಘುವನ್ನು ಹುಡುಕಿಕೊಂಡು ಹೋದ ಸಂದರ್ಭ ಗ್ರೋವ್ ಕಾಫಿ ತೋಟಕ್ಕೆ ತೆರಳುವ ರಸ್ತೆ ಬದಿಯಲ್ಲಿ ರಘು ಸತ್ತು ಬಿದ್ದಿರುವುದು ಕಂಡುಬAದಿದೆ. ಈ ಬಗ್ಗೆ ರಘುವಿನ ಕುಟುಂಬಸ್ಥರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಕೊಲೆ ಆರೋಪಿ ಚಾಮನ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ರಾಜು, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಮತ್ತು ಅಪರಾಧ ವಿಭಾಗದ ಠಾಣಾಧಿಕಾರಿ ಶಿವಣ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. -ವಾಸು