ವೀರಾಜಪೇಟೆ, ಮಾ. ೧೩: ವೀರಾಜಪೇಟೆ ಪುರಸಭೆ ೨೦೨೫-೨೬ನೇ ಸಾಲಿನ ವಾರ್ಷಿಕ ಹರಾಜಿನಲ್ಲಿ ಈ ಬಾರಿ ರೂ. ೩೬,೫೫,೫೦೦ ನಿವ್ವಳ ಲಾಭ ಗಳಿಸಿದೆ.

ಪುರಸಭೆಯ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಅಧ್ಯಕ್ಷತೆಯಲ್ಲಿ ನಡೆದ ೨೦೨೫-೨೬ನೇ ಸಾಲಿನ ವಾರ್ಷಿಕ ಹರಾಜಿನಲ್ಲಿ ಕೋಳಿ, ಮೀನು ಕುರಿ ಮಾಂಸ, ಮಳಿಗೆಗಳಿಂದ ೩೬,೫೫,೫೦೦ ಗಳ ಉತ್ತಮ ಲಾಭ ಬಂದಿದ್ದು ಸಮುದ್ರ ಮೀನಿನ ಮಳಿಗೆಗಳ ಹರಾಜಿನಲ್ಲಿ ಉತ್ತಮ ವಾರ್ಷಿಕ ಅದಾಯ ದೊರೆತಿದೆ. ಹಿಂದಿನ ಸಾಲಿನಲ್ಲಿ ಒಟ್ಟು ೧೮,೧೧.೫೦೦ ರೂ. ಅದಾಯ ಲಭಿಸಿತ್ತÄ. ಈ ಬಾರಿ ಕಳೆದ ಸಾಲಿಗಿಂತ ಹೆಚ್ಚುವರಿಯಾಗಿ ೧೮,೪೪.೦೦೦ ರೂ. ಲಾಭ ಲಭಿಸಿದೆ.

ವಾಹನ ಶುಲ್ಕ ಎತ್ತಾವಳಿಯಲ್ಲಿ ೨,೯೩,೦೦೦ ರೂ., ಸಂತೆ ಎತ್ತಾವಳಿ ೩,೪೪,೦೦೦ ರೂ., ೧ನೇ ಮೀನು ಮಳಿಗೆ ೭,೦೩, ೫೦೦ ರೂ., ೨ನೇ ಮೀನು ಮಳಿಗೆ ೮,೦೦,೧೦೦ ರೂ., ೩ನೇ ಮೀನು ಮಳಿಗೆ ೬,೯೧,೦೦೦, ೪ನೇ ಮೀನು ಮಳಿಗೆ ೫,೦೨,೫೦೦ ರೂ. ಸೇರಿದಂತೆ ಒಟ್ಟು ೨೬,೯೮,೦೦೦ ರೂ. ವಾರ್ಷಿಕ ಆದಾಯ ಲಭಿಸಿದೆ. ಕೋಳಿ ಮಳಿಗೆ ೧೦ ರಲ್ಲಿ ೭೬,೦೦೦ ರೂ., ಕೋಳಿ ಮಳಿಗೆ ೧೧ ರಲ್ಲಿ ೧,೫೧,೦೦೦ ರೂ., ಕೋಳಿ ಮಳಿಗೆ ೫ ರಲ್ಲಿ ೯೩,೦೦೦ ರೂ. ಸೇರಿ ಒಟ್ಟು ೩,೨೦,೦೦೦ ರೂ. ಆದಾಯ ಲಭಿಸಿದೆ. ಕುರಿ ಮಾಂಸದ ೨ ಮಳಿಗೆಯಲ್ಲಿ ಒಟ್ಟು ೧,೯೩,೦೦೦ ರೂ. ಆದಾಯ ಬಂದಿದೆ. ಹಂದಿ ಮಾಂಸದ ಮೂರು ಮಳಿಗೆಯ ಹರಾಜನ್ನು ನಿರೀಕ್ಷಿತ ಅದಾಯ ಬಾರದಿದ್ದರಿಂದ ಹರಾಜು ಮುಂದೂಡಲಾಗಿದೆ ಎಂದು ಪುರಸಭೆ ಮುಖ್ಯಧಿಕಾರಿ ನಾಚಪ್ಪ ಮಾಹಿತಿ ನೀಡಿದರು.

ಆರಂಭದಲ್ಲಿ ವರ್ತಕರ ಪರವಾಗಿ ಸಲೀಂ ಮಾತನಾಡಿ, ಹೈಟೆಕ್ ಮೀನು ಮಾಂಸ ಮಾರುಕಟ್ಟೆ ಎಂಬ ಹೆಸರಿಗೆ ಮಾತ್ರ. ಅಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಇಲ್ಲ. ಪ್ರತಿ ಹರಾಜಿನಲ್ಲಿ ನಮಗೆ ಭರವಸೆ ಮಾತ್ರ ಸಿಗುತ್ತಿದೆ ಅಷ್ಟೆ. ಶೌಚಾಲಯ ತೀರಾ ದುಸ್ಥಿತಿಯಲ್ಲಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಶೀಥಲಿಕರಣ ಯಂತ್ರ ಕೆಟ್ಟು ಮೂಲೆಗುಂಪಾಗಿದೆ, ಸ್ವಚ್ಛತೆ ಇಲ್ಲ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ವಾಹನ ನಿಲುಗಡೆ ಸಾಧ್ಯವಿಲ್ಲದಾಗಿದೆ ಎಂದು ದೂರಿದರು. ಅದೇ ರೀತಿ ವರ್ತಕರಿಂದ ಮೂರ್ನಾಡು ರಸ್ತೆಯಲ್ಲಿರುವ ಹಂದಿ ಮಳಿಗೆಯ ದುಸ್ಥಿತಿಯ ಬಗ್ಗೆ ಅಕ್ಷೇಪ ವ್ಯಕ್ತವಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಫಸಿಹತಬ್ಸಂ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.