ಮಡಿಕೇರಿ, ಮಾ. ೧೨: ಮಡಿಕೇರಿ-ಪಾಣತ್ತೂರು (ಕೇರಳ ಗಡಿ) ಮಾರ್ಗದಲ್ಲಿ ಬಾಕಿ ಉಳಿದಿರುವ ರಸ್ತೆ ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಆರಂಭಿಸುವ ಜೊತೆಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತೀನ್ ಗಡ್ಕರಿ ಅವರಿಗೆ ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಸಲ್ಲಿಸಿದ್ದಾರೆ.
ಮಡಿಕೇರಿ ಜಿಲ್ಲೆಯ ಭಾಗಮಂಡಲ ಹೋಬಳಿಯ ಕುಂದಚೇರಿಯ ನಿವಾಸಿಗಳು ಸದರಿ ಮಾರ್ಗದಲ್ಲಿ ಬಾಕಿ ಇರುವ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿ, ಶೀಘ್ರ ಪೂರ್ಣಗೊಳಿಸುವಂತೆ ನನಗೆ ಮನವಿ ಸಲ್ಲಿಸಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಆದರೆ ನಿರ್ಮಾಣ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ನನಗೆ ತಿಳಿಸಿದ್ದಾರೆ. ಈ ವಿಳಂಬದಿAದ ಸದರಿ ಪ್ರದೇಶದ ಜನರಿಗೆ ಅನಾನುಕೂಲ ಉಂಟಾಗಿದೆ. ಆ ಮೂಲಕ ಅವರ ಸಂಪರ್ಕ, ವ್ಯಾಪಾರ ಸೇರಿದಂತೆ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಸ್ಥಳೀಯ ಪ್ರಯಾಣಿಕರು ಮತ್ತು ಅಂತರ ರಾಜ್ಯ ಪ್ರಯಾಣಕ್ಕೆ ಈ ರಸ್ತೆಯ ಪ್ರಾಮುಖ್ಯತೆ ಗಮನದಲ್ಲಿಟ್ಟುಕೊಂಡು ನಿರ್ಮಾಣ ಪ್ರಕ್ರಿಯೆ ತ್ವರಿತವಾಗಿ ಆರಂಭಿಸಲು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಯದುವೀರ್ ಒಡೆಯರ್ ತಮ್ಮ ಮನವಿಯಲ್ಲಿ ಕೇಂದ್ರ ಸಚಿವರನ್ನು ಕೋರಿದ್ದಾರೆ.