ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ: ಕೊಡಗು ವಿಶ್ವವಿದ್ಯಾಲಯ ರದ್ದುಗೊಳಿಸುವುದು ಅಥವಾ ವಿಲೀನಗೊಳಿಸುವ ಸರಕಾರದ ಚಿಂತನೆಯ ಬಗ್ಗೆ ತಕ್ಷಣ ಮುಖ್ಯಮಂತ್ರಿಗಳು ಅಧಿಕೃತ ಹೇಳಿಕೆ ನೀಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮೂಡಿರುವ ಗೊಂದಲವನ್ನು ತಕ್ಷಣ ನಿವಾರಿಸಬೇಕಾಗಿದೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.
ಅವರು ಕುಶಾಲನಗರದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಡಗು ವಿ.ವಿ. ರದ್ದುಪಡಿಸಲು ಹೊರಟಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣ ದುರುಪಯೋಗ ಸಿ ಮತ್ತು ಡಿ ಜಾಗವನ್ನು ಅರಣೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಗಳು ಮತ್ತು ಅಲ್ಪಸಂಖ್ಯಾತರ ಓಲೈಕೆಗಾಗಿ ಬಜೆಟ್‌ನಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಈ ಎಲ್ಲ ನೀತಿಗಳ ವಿರುದ್ಧ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರಕಾರದ ಈ ಎಲ್ಲಾ ಚಿಂತನೆಗಳ ಖಂಡಿಸಿ ಸದ್ಯದಲ್ಲಿಯೇ ಕೊಡಗು ಬಂದ್ ಮಾಡುವ ಎಚ್ಚರಿಕೆ ನೀಡಿದರು. ಬಜೆಟ್ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವ ಬಗ್ಗೆ ಹೇಳಿಕೆ ನೀಡಿರುವುದು ನಂತರ ಬೆಂಗಳೂರಿಗೆ ತೆರಳಿದ ನಿಯೋಗಕ್ಕೆ ಉತ್ತರಿಸಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ವಿ.ವಿ.ಯನ್ನು ಉಳಿಸುವ ಸಂಬAಧವಾಗಿ ಬಹಿರಂಗವಾಗಿ ಹೇಳಿಕೆ ನೀಡಬೇಕಾಗಿದೆ ಎಂದು ಹೇಳಿದರು. ಬಿಜೆಪಿ ಮೂಲಕ ಕೊಡಗು ವಿ.ವಿ. ಉಳಿಸಿ ಅಭಿವೃದ್ಧಿಗೊಳಿಸುವಂತೆ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿದೆ. ಸಿ ಅಂಡ್ ಡಿ ಲ್ಯಾಂಡ್ ವಿಷಯ ಹಿನ್ನೆಲೆಯಲ್ಲಿ ಜಿಲ್ಲೆಯ ಇಬ್ಬರು ಶಾಸಕರು ರಾಜೀನಾಮೆ ನೀಡಬೇಕಾಗಿದೆ ಹಿಂದೆ ಗಾಡ್ಗಿಲ್ ವರದಿ ಸಂದರ್ಭ ತಾವುಗಳು ರಾಜೀನಾಮೆ ನೀಡಲು ಮುಂದಾಗಿ ಹೋರಾಟ ಮಾಡಿರುವ ಬಗ್ಗೆ ಸ್ಮರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಸಂಕಷ್ಟದಲ್ಲಿದ್ದು ಅವರು ಅನುಭವಿಸುತ್ತಿರುವ ಭೂಮಿಯನ್ನು ಅವರಿಗೆ ವಾಪಸ್ ನೀಡಬೇಕಾಗಿದೆ ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪ್ರಗತಿ ಪಥದಲ್ಲಿರುವ ಕೊಡಗು ವಿ.ವಿ.ಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರದ ಪ್ರತಿನಿಧಿಗಳು ಅನಾವಶ್ಯಕ ಹೇಳಿಕೆ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅಧಿಕೃತ ಹೇಳಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಪತ್ರಿಕೆಗಳ, ಮಾಧ್ಯಮಗಳ ಮೂಲಕ ಮಾಹಿತಿ ನೀಡಬೇಕಾಗಿದೆ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಬಿಜೆಪಿ ತಂದ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದೇ ಸರಕಾರದ ಷಡ್ಯಂತ್ರ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಜಿಲ್ಲೆಯ ಪ್ರಸಕ್ತ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಕೊಡಗು ಬಂದ್ ನಿಶ್ಚಿತ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿದರು. ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಸೇರಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಂತರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಜನತಾ ಪಕ್ಷದ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ವೀರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಆರ್.ಕೆ. ಚಂದ್ರು, ಮಾದಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮಾವಾಜಿ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಮೋಹಿತ್, ಮಂಡಲ ಉಪಾಧ್ಯಕ್ಷ ಕಿಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ನಾಗೇಶ್, ಕುಶಾಲನಗರ ನಗರ ಘಟಕದ ಅಧ್ಯಕ್ಷ ಚರಣ್, ನಗರ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಕಾರ್ಯದರ್ಶಿ ಸಚಿನ್, ಆದರ್ಶ್, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಕುಶಾಲಪ್ಪ, ಕೂಡುಮಂಗಳೂರು ಅಧ್ಯಕ್ಷ ಭಾಸ್ಕರ್ ನಾಯಕ್, ಪ್ರಮುಖರಾದ ಜೈವರ್ಧನ್, ಅಮೃತ್‌ರಾಜ್, ಡಿ.ಕೆ. ತಿಮ್ಮಪ್ಪ, ಚಂದ್ರಶೇಖರ್ ಹೇರೂರು, ನವನೀತ್, ಪ್ರಭಾಕರ್, ದಿನೇಶ್, ಮಣಿಕಂಠ, ಅವಿನಾಶ್, ಸಂತೋಷ್, ಇಂದಿರಾ ರಮೇಶ್, ನಿತ್ಯಾನಂದ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಇದ್ದರು.