ಹೆಬ್ಬಾಲೆ, ಮಾ. ೧೦ : ತಾಲೂಕಿನ ಬಾಣವಾರ ಉಪ ವಲಯದಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಅನಾಹುತ ತಡೆಯಲು ಅರಣ್ಯ ಇಲಾಖೆಯಿಂದ ಫೈರ್ ಲೈನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬಾಣವಾರ ಉಪ ವಲಯ ಅರಣ್ಯಾಧಿಕಾರಿ ಶ್ರವಣ ಕುಮಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಅರಣ್ಯದೊಳಗೆ ಹಾಗೂ ಗಡಿ ಭಾಗಗಳಲ್ಲಿ ಫೈರ್ಲೈನ್ ನಿರ್ಮಾಣ ಮಾಡುವುದರ ಜೊತೆಗೆ ಅರಣ್ಯದಂಚಿನ ಗ್ರಾಮಗಳ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಬಾಣವಾರ ಗೇಟ್ನಿಂದ ಆಲದಮರವರೆಗೆ ಹಾಗೂ ಎಡಪಾರೆ ಹಾಗೂ ಮರಿಯಾನಗರ ರಸ್ತೆಯ ಅಂಚಿನಲ್ಲಿ ಒಣಗಿದ್ದ ಗಿಡಗಂಟೆ ಹಾಗೂ ಉದುರಿದ ಎಲೆಗಳಿಗೆ ಬೆಂಕಿ ಹಚ್ಚಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ದ್ವಿಚಕ್ರ ಸವಾರರು ಹಾಗೂ ವಾಹನ ಚಾಲಕರು ಧೂಮಪಾನ ಮಾಡಿ ಅರ್ಧಕ್ಕೆ ಎಸೆದ ಬೀಡಿ, ಸಿಗರೇಟ್ಗಳಿಂದ ಬೆಂಕಿ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಫೈರ್ ಲೈನ್ ನಿರ್ಮಾಣ ಮಾಡಲಾಗುತ್ತಿದೆ.ಜೊತೆಗೆ ರಸ್ತೆಯ ಎರಡು ಕಡೆಗಳಲ್ಲಿ ನೆಟ್ಟಿರುವ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ ಎಂದು ಡಿಆರ್ಎಫ್ಓ ಶರವಣಕುಮಾರ್ ತಿಳಿಸಿದರು. ಈ ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರವೀಣ್, ಬರ್ಮಾಪ್ಪ, ನಾಗರಾಜು, ರಂಜಿತ್, ಪ್ರವೀಣ್ ಕುಮಾರ್, ಸತೀಶ್ ಪಾಲ್ಗೊಂಡಿದ್ದರು.