ಕಣಿವೆ, ಮಾ. ೧೦: ತರಬೇತಾರ್ಥಿಗಳು ತರಬೇತಿ ಅವಧಿಯಲ್ಲಿ ಕಲಿತದ್ದನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಉತ್ತಮ ನೌಕರರಾಗಿ ಸೇವೆ ಮಾಡ ಬೇಕೆಂದು ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯ ಅರಣ್ಯ ತರಬೇತುದಾರರಿಗೆ ಕರೆಕೊಟ್ಟರು. ಕುಶಾಲನಗರದ ಗಂಧದಕೋಠಿಯಲ್ಲಿನ ಅರಣ್ಯ ತರಬೇತಿ ಕೇಂದ್ರದ ನಾಲ್ಕನೇ ತಂಡದ ಅರಣ್ಯ ವೀಕ್ಷಕರ ಬುನಾದಿ ತರಬೇತಿಯ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ವನ್ಯ ಜೀವಿ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅರಣ್ಯ ನೌಕರರಾಗಿ ಕರ್ತವ್ಯ ನಿರ್ವಹಿಸುವ ಅರಣ್ಯ ನೌಕರರು ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಅಳವಡಿಸಿಕೊಳ್ಳಲು ಸಲಹೆಯಿತ್ತರು. ಸಾರ್ವಜನಿಕರೊಂದಿಗೆ ಒಡನಾಟ ಹಾಗೂ ಅಧಿಕಾರಿ ಗಳೊಂದಿಗೆ ಕಾಯಕ ನಿಷ್ಠೆ ಪಾಲಿಸಿದರೆ ಒಳ್ಳೆಯ ಸೇವೆ ಸಾಧ್ಯವಾಗುತ್ತದೆ ಎಂದು ಡಾ.ಮಾಲತಿ ಪ್ರಿಯ ಕಿವಿ ಮಾತು ಹೇಳಿದರು.
ಬೆಂಗಳೂರಿನ ಕಾಡುಗೋಡಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ಅರಣ್ಯ ತರಬೇತಾರ್ಥಿಗಳು ಜೀವನ ಮೌಲ್ಯ ಗಳನ್ನು ಮೊದಲು ಬೆಳೆಸಿಕೊಳ್ಳಬೇಕು. ಅರಣ್ಯ ಇಲಾಖೆಯನ್ನು ಪ್ರತಿನಿಧಿಸುವ ನೌಕರರು ಜನಸಾಮಾನ್ಯರ ಜೊತೆ ಗೌರವದ ವರ್ತನೆ ತೋರಬೇಕು. ಜೀವ ಪ್ರಬೇಧಗಳನ್ನು ಕುತೂಹಲಕಾರಿಯಾಗಿ ಅರಿಯಲು ಅಭಿಷೇಕ್ ಹೇಳಿದರು.
ವೀರಾಜಪೇಟೆ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್.ಜಗನ್ನಾಥ್ ಮಾತನಾಡಿ, ನಾಡಿನ ನೆಲ-ಜಲ, ಪರಿಸರದ ಸಂರಕ್ಷಣೆಗೆ ತರಬೇತಾರ್ಥಿಗಳು ಸದಾ ಶ್ರಮಿಸಬೇಕು. ಜೀವ ವೈವಿಧ್ಯ ತಾಣಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕು. ಸರ್ಕಾರ ಕೊಡುವ ಸಂಬಳಕ್ಕೆ ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸಬೇಕೆಂದರು.
ಕುಶಾಲನಗರದ ಅರಣ್ಯ ತರಬೇತಿ ಕೇಂದ್ರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಬಿದರಿ, ಕಳೆದ ಆರು ತಿಂಗಳ ಅವಧಿಯಲ್ಲಿ ತರಬೇತಾರ್ಥಿಗಳಿಗೆ ನಡೆಸಿಕೊಟ್ಟ ತರಬೇತಿಯ ಸವಿವರಗಳನ್ನು ಸಭೆಯಲ್ಲಿ ಮಂಡಿಸಿದರು. ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಭಾಸ್ಕರ ಅವರು ಕಾರ್ಯಕ್ರಮಕ್ಕೂ ಮುನ್ನಾ ತರಬೇತು ದಾರರು ನಡೆಸಿಕೊಟ್ಟ ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿದರು.
ಮಡಿಕೇರಿ ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಅರಣ್ಯಗಳಲ್ಲಿ ಸಕಲ ಜೀವಿಗಳು ಜೀವಿಸಬೇಕು ಹಾಗೂ ಬದುಕಬೇಕು. ಸುಸ್ಥಿರ ಸಮಾಜ ಹಾಗೂ ಸುಸ್ಥಿರ ಜೀವ ಕೋಶ ನಿರ್ಮಾಣ ಅರಣ್ಯ ಇಲಾಖೆಯ ಧ್ಯೇಯವಾಗಿದೆ ಎಂದರು. ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಗಾನಶ್ರೀ, ಸಂಶೋಧನಾ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತೀರ್ಥ, ತರಬೇತಿ ಕೇಂದ್ರದ ಉಪವಲಯ ಅರಣ್ಯಾಧಿಕಾರಿ ಐಶ್ವರ್ಯ ಆರ್. ಗೌಡ, ಎಂ.ನಾಗೇಶ್ ಕುಮಾರ್, ರಿಷಾ ಪಾರ್ವತಿ, ಕೆ.ಎಲ್.ನಳಿನಿ, ಗಸ್ತು ಅರಣ್ಯಪಾಲಕ ಆರ್.ರಘು ಇದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐಶ್ವರ್ಯ ಗೌಡ ನಿರೂಪಿಸಿದರು. ಮತ್ತೋರ್ವ ಉಪವಲಯ ಅರಣ್ಯಾಧಿಕಾರಿ ಎಂ.ನಾಗೇಶ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.