ಶನಿವಾರಸAತೆ, ಮಾ. ೯: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕೊಡ್ಲಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣ ಕಾರ್ಯಕ್ರಮವನ್ನು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಡಿಕೇರಿಯ ಕೊಡಗು ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗದ ಆಡಳಿತ ವೈದ್ಯಾಧಿಕಾರಿ ಡಾ.ಕರುಂಬಯ್ಯ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಹಾ ದಾನಗಳಲ್ಲಿ ಒಂದೆನಿಸಿದೆ. ಒಂದು ಜೀವದ ಉಳಿವಿಗಾಗಿ ಮಾಡುವ ರಕ್ತದಾನದಿಂದ ದಾನಿ ಎನಿಸಿಕೊಳ್ಳುವುದೆ ಶ್ರೇಷ್ಠ ಎಂದರು.

ಶನಿವಾರಸAತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್ ಮಾತನಾಡಿ, ರಕ್ತದಾನ ಮಾಡುವುದರಿಂದ ಆ ವ್ಯಕ್ತಿಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ಶಿಬಿರದಲ್ಲಿ ೩೧ ಮಂದಿ ರಕ್ತದಾನ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಪಿ.ಮಹೇಶ್, ಆರೋಗ್ಯ ಅಧಿಕಾರಿ ಧರಣೇಶ್ ರಾಜ್, ನಂದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ, ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಬೋಜಪ್ಪ, ಗಿರೀಶ್, ಪೂರ್ಣಿಮಾ, ಜಾನಕಿ, ಪಿಡಿಓ ಆಯಿಷಾ, ಆಶಾ ಕಾರ್ಯಕರ್ತೆಯರಾದ ಸಂಧ್ಯಾ, ನಂದಿನಿ, ಸೌಮ್ಯಾ, ಉಷಾ, ರಜನಿ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ಅಶ್ವಿನಿ, ಭಾನುಮತಿ, ಫಾತಿಮಾ. ಪದ್ಮ, ಭಾಗ್ಯ ಹಾಜರಿದ್ದರು.