ಸೋಮವಾರಪೇಟೆ, ಮಾ. ೮ : ಸಮೀಪದ ಯಡೂರು ಗ್ರಾಮದ ವೈಸಿಸಿ ಕ್ರಿಕೆಟ್ ಕ್ಲಬ್ನ ೨೫ ನೇ ವರ್ಷಾಚರಣೆ ಅಂಗವಾಗಿ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ೩೫ ವರ್ಷ ಮೇಲ್ಪಟ್ಟ ಆಟಗಾರರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಹಿರಿಯ ಆಟಗಾರರು ಸಂಭ್ರಮದಿAದ ಭಾಗಿಯಾಗಿದ್ದರು.
ಯೌವನಾವಸ್ಥೆಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದ ಆಟಗಾರರು ಇಂದಿನ ಪಂದ್ಯಾಟದಲ್ಲಿ ಹಳೆಯ ಕೌಶಲ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಇದೇ ಪ್ರಥಮ ಬಾರಿಗೆ ೩೫ ವರ್ಷ ಮೇಲ್ಪಟ್ಟ ಆಟಗಾರರಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು.
ಗ್ರಾಮ ಪಂಚಾಯಿತಿ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ೧೪ ತಂಡಗಳು ಭಾಗಿಯಾಗಿದ್ದವು. ೪ ಓವರ್ಗಳಿಗೆ ಪ್ರತಿ ಪಂದ್ಯಾಟಗಳು ನಡೆದವು. ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಅವರು, ಕ್ರೀಡೆಗಳು ಪರಸ್ಪರ ಸಾಮರಸ್ಯ ಬೆಸೆಯುವ ವೇದಿಕೆಗಳಾಗಿವೆ ಎಂದು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್ಕುಮಾರ್ ಮಾತನಾಡಿ, ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ನಿಂದ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅದರಲ್ಲೂ ೩೫ ವರ್ಷ ಮೇಲ್ಪಟ್ಟ ಆಟಗಾರರಿಗೆ ಮೈದಾನದಲ್ಲಿ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿವೆ ಎಂದರು.
ಯಡೂರು ಗ್ರಾಮಾಧ್ಯಕ್ಷ ಎ. ಈ. ಮಲ್ಲಪ್ಪ ಅವರು ಮಾತನಾಡಿ, ಕ್ರೀಡೆಯನ್ನು ಮೈಗೂಡಿಸಿಕೊಂಡರೆ ದುಶ್ಚಟಗಳಿಂದ ದೂರ ಉಳಿಯಬಹುದು. ಕ್ರೀಡೆಯಲ್ಲೂ ಉತ್ತಮ ಭವಿಷ್ಯವಿದ್ದು, ವಿದ್ಯಾರ್ಥಿಗಳು ಕ್ರೀಡೆಯತ್ತಲೂ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ವೈಸಿಸಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಎ.ಎಲ್. ಸಂದೇಶ್, ಕಾಫಿ ಬೆಳೆಗಾರ ಡಿ.ಎಂ. ಸುಬ್ಬಯ್ಯ, ಹಾನಗಲ್ಲು ಗ್ರಾ.ಪಂ. ಸದಸ್ಯ ಬಿ.ಕೆ. ಸುದೀಪ್, ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ಹಿರಿಯ ಕ್ರಿಕ್ರೆಟ್ ಆಟಗಾರ ನಾಗರಾಜು ಅವರುಗಳು ಉಪಸ್ಥಿತರಿದ್ದರು.
ಇಂದು ಮುಕ್ತ ಕ್ರಿಕೆಟ್ ಪಂದ್ಯಾಟ: ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ತಾ. ೮ ಮತ್ತು ೯ ರಂದು ಮುಕ್ತ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ತಾ. ೮ರಂದು (ಇಂದು) ಬೆಳಿಗ್ಗೆ ೯ ಗಂಟೆಗೆ ಪಂದ್ಯಾಟಗಳು ಆರಂಭಗೊಳ್ಳಲಿವೆ. ಪ್ರಥಮ ಬಹುಮಾನ ೩೦ ಸಾವಿರ ನಗದು, ದ್ವಿತೀಯ ೨೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲೂ ಪ್ರಶಸ್ತಿಗಳನ್ನು ವಿತರಿಸಲಾಗುವುದು.