"ಮುಟ್ಟು ಕೆಟ್ಟದೆಂದು ಹೇಳುವ ಮೂಢರು ಹುಟ್ಟಿದ್ದು
ಮುಟ್ಟಿನಿಂದಲೇ, ಕೆಟ್ಟ ಆಲೋಚನೆಗಳಿಂದಲ್ಲ."
ಹೆಣ್ಣು ತಾನು ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸೊಸೆಯಾಗಿ, ಮನೆಯ ಯಜಮಾನಿಯಾಗಿ, ತಾಯಿಯಾಗಿ ಸಮರ್ಥ ಸ್ಥಾನವನ್ನು ನಿಭಾವಣೆ ಮಾಡುತ್ತಲೆ ಬರುತ್ತಿದ್ದಾಳೆ. ಎಲ್ಲರ ಜೀವನದ ಪ್ರಾಥಮಿಕ ಆರೈಕೆಗಾರ್ತಿ ಹೆಣ್ಣೆ ಆಗಿರುತ್ತಾಳೆ.
ತಾಯಿಯು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದು, ಅವಳ ಪಾತ್ರವು ಅನೇಕ ರೀತಿಯಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಎಲ್ಲರ ಬಾಳಿನ ಮೊದಲ ಹಂತದಲ್ಲಿ ಶ್ರೇಷ್ಟವಾದ ಆರೈಕೆಯನ್ನು ಒದಗಿಸುತ್ತಾಳೆ. ಇದು ಪ್ರತಿಯೊಬ್ಬರ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ.ಮಾತ್ರವಲ್ಲದೆ ಹೆಣ್ಣು ತನ್ನವರಿಗಾಗಿ ಭಾವನಾತ್ಮಕ ಬೆಂಬಲ, ಪ್ರೋತ್ಸಾಹ, ಮಾತ್ರವಲ್ಲದೆ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಜೀವನದಲ್ಲಿ ಸಕಾರಾತ್ಮಕ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಕಲಿಸುತ್ತಾಳೆ. ಅವು ಮಕ್ಕಳಿಗೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡುತ್ತವೆ.
ಹೆಣ್ಣು ಕುಟುಂಬದ ನೆಲೆ ಆಗಿದ್ದು, ಕುಟುಂಬ ಸದಸ್ಯರ ನಡುವೆ ಸಂಬAಧಗಳನ್ನು ಬೆಸೆಯುತ್ತಾಳೆ. ಅವಳು ಕುಟುಂಬವನ್ನು ಒಟ್ಟಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಕುಟುಂಬದ ಆರೋಗ್ಯವನ್ನು ಕಾಪಾಡಲು ಮತ್ತು ಸುಖವನ್ನು ಒದಗಿಸಲು ಬಹಳಷ್ಟು ಶ್ರಮಿಸುತ್ತಾಳೆ. ಉತ್ತಮ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ಮನಸ್ಸಿನ ಶಾಂತಿ ಬಗ್ಗೆ ಗಮನ ಹರಿಸುತ್ತಾರೆ.
ತಮ್ಮ ಮಕ್ಕಳಿಗೆ ಉನ್ನತ ಗುರಿಗಳನ್ನು ಹೊಂದಲು ಪ್ರೇರಣೆಯಾಗುತ್ತಾ, ತಮ್ಮ ಮಕ್ಕಳ ಕನಸುಗಳನ್ನು ಸಾಕಾರ ಮಾಡಲು ಪ್ರೋತ್ಸಾಹಿಸುತ್ತಾಳೆ. ಶಿಕ್ಷಣ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಮಕ್ಕಳಿಗೆ ಶಾಲಾ ಕಾರ್ಯಗಳಲ್ಲಿ ಸಹಾಯ ಮಾಡುತ್ತಾ ವಿದ್ಯಾಭ್ಯಾಸಕ್ಕೆ ಮಹತ್ವ ನೀಡುವಲ್ಲಿ ಹೆಣ್ಣಿನ ಪಾತ್ರವು ಜೀವನದಲ್ಲಿ ಅಪ್ರತಿಮವಾಗಿದೆ. ಹೆಣ್ಣು ನಮಗೆ ಬೆಂಬಲ, ಪ್ರೇರಣೆ ಮತ್ತು ಪ್ರೀತಿಯನ್ನು ನೀಡುತ್ತಾಳೆ ಒಟ್ಟಾರೆಯಾಗಿ ಮಹಿಳೆಯರು ಸಮಾಜದಲ್ಲಿ ಬಹುಮುಖ ಪಾತ್ರಗಳನ್ನು ವಹಿಸುತ್ತಿದ್ದಾರೆ. ಅವರ ಪಾತ್ರವು ಕೇವಲ ಕುಟುಂಬ ಮಟ್ಟದಲ್ಲಿ ಮಾತ್ರವಲ್ಲ, ಬೃಹತ್ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕೂಡ ಮಹತ್ವದ್ದಾಗಿದೆ.
ಮಹಿಳೆಯರು ಉದ್ಯಮ, ಕೃಷಿ, ಮತ್ತು ಸೇವಾ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಭಾಗವಹಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಸಮಾಜದಲ್ಲಿ ಅಭಿವೃದ್ಧಿಗೆ ತೊಡಗಿಸುತ್ತಾರೆ.
ಭಾರತದ ವಿವಿಧ ರಾಜ್ಯಗಳಲ್ಲಿ ಮಹಿಳೆಯರು ಉದ್ಯಮದಲ್ಲಿ ಶೇ. ೩೦ ರಷ್ಟು ಪಾಲನ್ನು ಹೊಂದಿದ್ದಾರೆ, ಮತ್ತು ಈ ಸಂಖ್ಯೆಯು ನಿರಂತರವಾಗಿ ಏರುತ್ತಿದೆ. ಮಹಿಳೆಯರು ರಾಜಕೀಯದಲ್ಲಿ ತಮ್ಮ ಸ್ಥಾನವನ್ನು ಹೆಚ್ಚಿಸುತ್ತಿದ್ದಾರೆ. ೨೦೧೪ರ ಲೋಕಸಭೆ ಚುನಾವಣೆಯಲ್ಲಿ ೬೧ ಮಹಿಳೆಯರು ಆಯ್ಕೆಯಾಗಿದ್ದು, ಇದು ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ ಮಹಿಳಾ ಪ್ರತಿನಿಧಿತ್ವವು ಶೇ. ೧೧ರಷ್ಟೇ ಇದ್ದರೂ, ಇದು ಮೊದಲಿನ ಚುನಾವಣೆಗಳಿಗೆ ಹೋಲಿಸಿದರೆ ಹೆಚ್ಚು.
ಮಹಿಳೆಯರಿಗೆ ನೀಡಲಾಗುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಉದಾಹರಣೆಗೆ, ಸ್ತ್ರೀಶಕ್ತಿ ಯೋಜನೆ, ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯ ಬೆಳವಣಿಗೆಗೆ ಸಹಾಯ ಮಾಡುತ್ತವೆ.ಈ ಮೂಲಕ ಆಕೆ ತನ್ನ ಕುಟುಂಬದ ಅಭಿವೃದ್ಧಿಗೆ ಕಾರಣವಾಗಿದ್ದಾಳೆ. ಆದಾಗ್ಯೂ ವರದಕ್ಷಿಣೆಯ ಕಾರಣಕ್ಕೊ, ಮದ್ಯಪಾನದ ದಾಸ್ಯಕ್ಕೊಳಗಾದ ಪುರುಷ ಮತ್ತು ಹೆಣ್ಣು ಮಕ್ಕಳನ್ನೆ ಹೆತ್ತಳೆಂಬ ಮೌಢ್ಯದ ಕುಟುಂಬ ವರ್ಗದವರಿಂದಲೊ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ.
ಮಹಿಳೆಯರನ್ನು ತುಚ್ಛ ಭಾವನೆಗಳಿಂದ ಕಾಣದೆ, ಉತ್ತಮ ಪೋಷಕಾಂಶಗಳು, ಉತ್ತಮ ಅವಕಾಶಗಳು, ಉತ್ತಮ ಸಹಕಾರದೊಂದಿಗೆ ಪುರುಷರು ಸಲಹಿದರೆ ಉತ್ತಮ ಮಗಳನ್ನು, ಸೊಸೆಯನ್ನು, ತಾಯಿಯನ್ನು ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ನೀಡಬಹುದು. ಸಂಸಾರವೆAಬ ಗಾಡಿಯ ಸರಿ ಸಮಾನ ಚಕ್ರದಂತೆ ಮಹಿಳೆ ಪುರುಷರ ಒಗ್ಗಟ್ಟು ಸಮಭಾವ ಈ ದಿನಾಚರಣೆಗೆ ಸಾಕ್ಷ್ಯ ತರಲಿ..
ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
- ಮಾಲಾಮೂರ್ತಿ (ಮಾಲಾದೇವಿ), ಶಿಕ್ಷಕಿ, ಕಾನ್ಬೈಲ್.