ಮಂಡ್ಯ, ಮಾ. ೮: ಪತ್ನಿ ಹಾಗೂ ಮಗ ನಾಪತ್ತೆಯಾದ ಕುರಿತು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರ ವರ್ತನೆ ವಿರೋಧಿಸಿ ಪತಿ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಮದ್ದೂರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆದಿದೆ. ಮದ್ದೂರಿನ ಸಿದ್ದಾರ್ಥನಗರದ ವೆಂಕಟೇಶ್ನಿAದ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ವೆಂಕಟೇಶ್, ಕಳೆದ ೨೦೧೭ರಲ್ಲಿ ತಾವು ಸೋಮವಾರಪೇಟೆ ಸಮೀಪದÀ ಅಬ್ಬೂರುಕಟ್ಟೆಯ ಅನ್ಯಧರ್ಮದ ಯುವತಿಯೋರ್ವಳನ್ನು ಪ್ರೀತಿಸಿ ಮದುವೆ ಆಗಿದ್ದರು. ಆನಂತರ ಹಿಂದೂ ಧರ್ಮಕ್ಕೆ ವೆಂಕಟೇಶ್ ಪತ್ನಿ ಮತಾಂತರವಾಗಿ ಖುಷಿ ಎಂಬ ಹೆಸರನ್ನು ಇಟ್ಟುಕೊಂಡಿದ್ದರು. ದಂಪತಿಗಳಿಗೆ ಮೂರು ವರ್ಷದ ಗಂಡು ಮಗುವೂ ಇದೆ. ಕಳೆದ ಜನವರಿ ೨೩ ರಂದು ಸೋಮವಾರಪೇಟೆಯ ತವರು ಮನೆಗೆ ಪತ್ನಿ ಹಾಗೂ ಮಗ ಹೋಗಿದ್ದರು. ಆನಂತರ ಪತ್ನಿ ಹಾಗೂ ಮಗ ಮನೆಗೆ ವಾಪಸ್ ಆಗಿಲ್ಲ ಎಂದು ವೆಂಕಟೇಶ್ ಹೇಳಿದ್ದಾರೆ.
ಸದ್ಯ ಪತ್ನಿ ಖುಷಿ ತಾಯಿಯ ವಿರುದ್ಧ ದೂರು ನೀಡಲು ವೆಂಕಟೇಶ್ ಮುಂದಾಗಿದ್ದು, ಆದರೆ ದೂರು ಸ್ವೀಕರಿಸದ ಹಿನ್ನೆಲೆ ರಾತ್ರಿ ಪ್ರತಿಭಟನೆ ಮಾಡಲಾಗಿದೆ. ವೆಂಕಟೇಶ್ ಅವರ ಪ್ರಕಾರ ಪತ್ನಿಯ ಮನೆಯವರು ಈಗ ಕೇರಳದಲ್ಲಿ ಇದ್ದು, ಅಲ್ಲಿ ಮಗುವಿಗೆ ಮುಂಜಿ ಮಾಡಿಸಲು ಮುಂದಾಗಿದ್ದಾರೆ. ಅಲ್ಲದೆ ಪತ್ನಿ ತಮ್ಮ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದು ಪತ್ನಿಗೆ ಕುಟುಂಬಸ್ಥರು ಗೃಹ ಬಂಧನ ವಿಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮದ್ದೂರು ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಪ್ರಾಥಮಿಕ ತನಿಖೆಯಲ್ಲಿ ಪತ್ನಿ ಪತಿಯನ್ನು ತೊರೆದು ಹೋಗಿರುವುದಾಗಿ ತಿಳಿದು ಬಂದಿದ್ದು ಆಕೆಯನ್ನು ಕರೆಸಲು ಪೊಲೀಸರನ್ನು ಕಳಿಸಲಾಗಿದೆ ಎಂದು ತಿಳಿಸಿದರು.
-ಕೋವರ್ಕೊಲ್ಲಿ ಇಂದ್ರೇಶ್