*ಗೋಣಿಕೊಪ್ಪ, ಫೆ. ೨೧: ಇಂದು ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕೋತ್ಸವ ತಾ. ೨೨ ಹಾಗೂ ೨೩ ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬೊಟ್ಟಿಯತ್ ನಾಡಿಗೆ ಸೇರಿದ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಈಚೂರು ಹಾಗೂ ಅರುವತೋಕ್ಲು ಸೇರಿದಂತೆ ಈ ಸುತ್ತಮುತ್ತಲ ಗ್ರಾಮಗಳ ಜನರು ಒಂದೆಡೆ ಸೇರಿ ನಡೆಸುವ ಶ್ರೀ ಈಶ್ವರ ದೇವರ (ನಾಡ್ ದೇವಸ್ಥಾನ) ವಾರ್ಷಿಕ ಉತ್ಸವ ತಾ. ೧೫ ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡಿದ್ದು, ತಾ. ೨೨ ರಂದು ನೆರ್ಪು ಹಾಗೂ ತಾ. ೨೩ ರಂದು ದೇವರ ಜಳಕ ನಡೆಯಲಿದೆ.
ನಾಡ್ ದೇವಸ್ಥಾನ ಎಂದು ಖ್ಯಾತಿ ಪಡೆದಿರುವ ಕುಂದಾ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಈಶ್ವರ ದೇವಸ್ಥಾನಕ್ಕೆ ಪೂರ್ವ ಕಾಲದ ಇತಿಹಾಸವಿದ್ದು, ಇಲ್ಲಿನ ತಕ್ಕಮುಖ್ಯಸ್ಥರಾಗಿ ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬ ಕಾರ್ಯನಿರ್ವಹಿಸುತ್ತಿದ್ದಾರೆ.
ತಾ. ೨೨ ರಂದು ಸಂಜೆ ೪.೩೦ ಗಂಟೆಗೆ ಎತ್ತು ಪೋರಾಟ ಆಗಮಿಸುವ ಮೂಲಕ ನೆರ್ಪು ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ನಂತರ ವಿವಿಧ ಪೂಜಾವಿಧಿ ವಿಧಾನಗಳು ನಡೆಯಲಿವೆ. ತಾ. ೨೩ ರಂದು ಬೆಳಿಗ್ಗೆಯಿಂದಲೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ರಾತ್ರಿ ೭ ಗಂಟೆಗೆ ದೇವರ ಅವಭೃತ ಸ್ನಾನ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.