ಕಣಿವೆ, ಫೆ. ೨೧: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಕಲಿಕೋತ್ಸವ ಕಾರ್ಯಕ್ರಮ ಸಂಭ್ರಮದಿAದ ನೆರವೇರಿತು.

ಕಲಿಕೋತ್ಸವದಲ್ಲಿ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಸಂಬAಧಿಸಿದ ಶಾಲೆಗಳ ಶಿಕ್ಷಕರು ಭಾಗಿಯಾದರು. ಮಕ್ಕಳಿಗಾಗಿ ಉತ್ತಮ ಕೈ ಬರಹ, ಸಂತೋಷದಾಯಕ ಗಣಿತ, ಗಟ್ಟಿ ಓದು, ಕಥೆ ಕಟ್ಟುವುದು, ನೆನಪಿನ ಪರೀಕ್ಷೆ, ರಸಪ್ರಶ್ನೆ, ಮತ್ತಿತರ ಚಟುವಟಿಕೆಗಳು ನಡೆದವು.

ತೀರ್ಪುಗಾರರಾಗಿ ವಿವಿಧ ಶಾಲೆಗಳ ಶಿಕ್ಷಕರಾದ ಹುಲುಸೆ ಬಸವರಾಜು, ನಾಗರಾಜು, ಮಹದೇವ ಕುಮಾರ್, ಸುಂದರ್, ಉದಯಪ್ರಕಾಶ್, ನಳಿನಿ, ದೀಪಿಕಾ ಕಾರ್ಯನಿರ್ವಹಿಸಿದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಮೂಲಕ ಮುಚ್ಚುವ ಹಂತದಲ್ಲಿನ ಸರ್ಕಾರಿ ಶಾಲೆಗಳನ್ನು ಉಳಿಸಿ ಕೊಳ್ಳುವುದು ಮತ್ತು ದಾಖಲಾಗುವ ಮಕ್ಕಳಿಗೆ ಗುಣಮಟ್ಟಣ ಶಿಕ್ಷಣವನ್ನು ನೀಡುವ ಮೂಲಕ ವಿವಿಧ ಆಯಾಮಗಳಲ್ಲಿ ಮಕ್ಕಳ ಕಲಿಕೆಯನ್ನು ದೃಢೀಕರಿಸುವ ಚಟುವಟಿಕೆ ಇದಾಗಿದೆ ಎಂದು ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕ ಹೇಮಂತ್ ರಾಜ್ ಹೇಳಿದರು. ಖಾಸಗಿ ಶಾಲೆಗಳ ಪ್ರಭಾವದಿಂದ ಸರ್ಕಾರಿ ಶಾಲೆಗಳು ಅಧೋಗತಿಯತ್ತ ಸಾಗುತ್ತಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪೋಷಕರು ಮುಂದಾಗಬೇಕು ಎಂದು ಕಾರ್ಯಕ್ರಮದ ಅತಿಥಿಯಾಗಿದ್ದ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೆ.ಎಸ್. ಮೂರ್ತಿ ಹೇಳಿದರು. ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಅರುಣ ಕುಮಾರಿ, ಪಿಡಿಓ ಮೋಹನ್, ಕಾರ್ಯದರ್ಶಿ ಸುರೇಶ್, ಕ್ಲಸ್ಟರ್ ಸಂಪನ್ಮೂಲ ಶಿಕ್ಷಕ ಆದರ್ಶ, ಹಳಗೋಟೆ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಕಣಿವೆ ಶಾಲೆಯ ಕಸ್ತೂರಿ, ಮಣಜೂರು ಶಾಲೆಯ ರಾಣಿ, ಜೇನುಕಲ್ಲು ಬೆಟ್ಟ ಶಾಲೆಯ ರಾಮೇಗೌಡ, ಹೆಬ್ಬಾಲೆಯ ವೆಂಕಟೇಶ್, ನಲ್ಲೂರು ಶಾಲೆಯ ಚಂದ್ರಶೇಖರ್, ಶಿರಂಗಾಲ ಶಾಲೆಯ ವಸಂತ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿರೂಪಾಕ್ಷ, ಸದಸ್ಯೆ ಪವಿತ್ರಾ ಇದ್ದರು.