ಮಡಿಕೇರಿ, ಫೆ. ೨೧: ಶಿಕ್ಷಣ, ತರಬೇತಿ ಎಂಬುದು ಎಲ್ಲಾ ಸಂಘ ಸಂಸ್ಥೆಗಳ ಉಳಿವು, ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿದೆ. ನಮ್ಮ ಪೂರ್ವಜರು ಸ್ಥಾಪಿಸಿ ಬೆಳೆಸಿರುವ ದವಸ ಭಂಡಾರಗಳಲ್ಲಿ ಶೇ. ೫೦ ರಷ್ಟು ಸಂಘಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಬಡ್ಡಿ ಸಹಾಯಧನ ಅಥವಾ ಇತರ ಯಾವುದೇ ಅನುದಾನಗಳು ಇಲ್ಲದೆ ಇರುವುದರಿಂದ ಹಿರಿಯರು ಸ್ಥಾಪಿಸಿದ ದವಸ ಭಂಡಾರಗಳು ನಷ್ಟದಲ್ಲಿವೆ. ಆದುದರಿಂದ ಆರ್ಥಿಕವಾಗಿ ಸದೃಢವಾಗಿರುವ ಸಂಸ್ಥೆಗಳು ದವಸ ಭಂಡಾರಗಳ ಅಭಿವೃದ್ಧಿಗೆ ಕೈಜೋಡಿಸಿದಲ್ಲಿ ಅವನತಿಯತ್ತ ಸಾಗುತ್ತಿರುವ ದವಸ ಭಂಡಾರಗಳನ್ನು ಉಳಿಸಬಹುದಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕಿಲನ್ ಗಣಪತಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೊಡಗು ಉಪಾಧ್ಯಾಯರ ಸಹಕಾರ ಸ್ಟೊರ‍್ಸ್ ಮತ್ತು ಮುದ್ರಣಾಲಯ, ವೀರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿಗಳಿಗೆ ಸಹಕಾರ ಕಾಯ್ದೆ ಕಾನೂನು, ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ನಿರ್ವಹಣೆ ಕುರಿತು ವೀರಾಜಪೇಟೆಯ ಕೊಡಗು ಉಪಾಧ್ಯಾಯರ ಸಹಕಾರ ಸ್ಟೊರ‍್ಸ್ ಮತ್ತು ಮುದ್ರಣಾಲಯದ ಸಭಾಂಗಣದಲ್ಲಿ ಏರ್ಪಡಿಸಲಾದ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

ಕೇಂದ್ರ ಬ್ಯಾಂಕ್‌ನಿAದ ದವಸ ಭಂಡಾರಗಳ ಕಾರ್ಯನಿರ್ವಹಣೆಗೆ ಬಹುಮಾನ ನೀಡಲಾಗುತ್ತದೆ. ಆದರೆ ಸಕಾಲದಲ್ಲಿ ಲೆಕ್ಕಪರಿಶೋಧನೆಯನ್ನು ನಡೆಸಲಾರದ ದವಸ ಭಂಡಾರಗಳು ಬಹುಮಾನದಿಂದ ವಂಚಿತವಾಗುತ್ತಿವೆ. ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ತಮ್ಮ ಸ್ವಂತ ಹಣದಿಂದ ಇಲಾಖೆಗಳಿಗೆ ಪದೇಪದೇ ಅಲೆದಾಡಿ ಸಂಘವನ್ನು ಕಾನೂನು ಚೌಕಟ್ಟಿನೊಳಗೆ ತರಲು ಬಹಳ ಪರಿಶ್ರಮ ಪಡುತ್ತಿದ್ದಾರೆ. ಡಿ.ಸಿ.ಸಿ. ಬ್ಯಾಂಕ್‌ನಿAದ ಒಂದು ಹಂತದವರೆಗೆ ಮಾತ್ರ ನೆರವು ನೀಡಬಹುದಾಗಿದ್ದು ಸರ್ಕಾರದ ನೆರವಿನೊಂದಿಗೆ ಮಾತ್ರ ನಷ್ಟವನ್ನು ನೀಗಬಹುದಾಗಿದೆ. ಈ ಕುರಿತು ಎಲ್ಲರೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, ಕೊಡಗಿನ ದವಸ ಭಂಡಾರಗಳು ಭವ್ಯ ಇತಿಹಾಸ ಹೊಂದಿವೆ. ಆಡಳಿತ ನಿರ್ವಹಣೆ, ಸಿಬ್ಬಂದಿ ನೇಮಕಾತಿ, ಕಾಯ್ದೆ-ಕಾನೂನು, ಲೆಕ್ಕಪರಿಶೋಧನೆ ಇತ್ಯಾದಿ ಕುರಿತು ಜಿಲ್ಲೆಯ ಸಹಕಾರ ಸಂಘಗಳಿಗೆ ನಿರಂತರ ತರಬೇತಿ ನೀಡುತ್ತಿದ್ದು, ಅದರಲ್ಲಿ ಒಂದು ಕಾರ್ಯಕ್ರಮವನ್ನು ದವಸ ಭಂಡಾರಗಳಿಗೆ ನೀಡಲಾಗುತ್ತಿದೆ. ಕೊಡಗು ಅಭಿವೃದ್ಧಿಯತ್ತ ಸಾಗಲು ದವಸ ಭಂಡಾರಗಳ ಸ್ಥಾಪನೆ ಹಾಗೂ ಸಹಕಾರ ತತ್ವವೇ ಕಾರಣ ಎಂದು ಹೇಳಿದರು. ಅಂದು ಆರ್ಥಿಕ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ದವಸ ಭಂಡಾರಗಳು ಆಹಾರ ದವಸ ದಾನ್ಯಗಳನ್ನು ಸಾಲ ನೀಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿವೆ. ಭತ್ತವನ್ನು ಸಾಲದ ರೂಪದಲ್ಲಿ ನೀಡಲು ಸ್ಥಾಪಿಸಿದ್ದ ೧೦೦ಕ್ಕೂ ಮಿಗಿಲಾದ ದವಸ ಭಂಡಾರಗಳು ಕ್ರಮೇಣ ೯೫ಕ್ಕೆ ಇಳಿದು, ೭೬ ಕ್ರಿಯಾಶೀಲವಾಗಿದ್ದರೂ ೫೪ ಮಾತ್ರ ಲಾಭದಲ್ಲಿವೆ. ಆದರೂ ಸುಮಾರು ೨೫ಕ್ಕೂ ಹೆಚ್ಚು ಸಂಸ್ಥೆಗಳು ಸ್ವತಂತ್ರ ಪೂರ್ವದಲ್ಲೇ ಸ್ಥಾಪನೆ ಗೊಂಡು ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಇAದು ಅವೈಜ್ಞಾನಿಕ ರಸಗೊಬ್ಬರ ಬಳಕೆಯಿಂದ ಬಹಳಷ್ಟು ಜನರು ಕ್ಯಾನ್ಸರ್ ನಂತರ ಮಾರಕ ಕಾಯಿಲೆಗೀಡಾಗುತ್ತಿದ್ದಾರೆ. ಸಾವಯವ ಕೃಷಿ ಇದಕ್ಕೆ ಪರ್ಯಾಯವಾಗಬಲ್ಲದು ಎಂದು ಅಭಿಪ್ರಾಯ ಹೊಂದಲಾಗಿದೆ.

ಈ ಸಂದರ್ಭದಲ್ಲಿ ದವಸ ಪದ್ಧತಿಯ ಲೆಕ್ಕ ಬಲ್ಲವರಿಂದ ಸಕಾಲದಲ್ಲಿ ಲೆಕ್ಕಪರಿಶೋಧನೆ ನಡೆಸಿಕೊಡಬೇಕಾಗಿ ಈ ಸಂದರ್ಭದಲ್ಲಿ ಇಂದ್ರಕುಮಾರ್, ಮಾಚಯ್ಯ ಕೋರಿದರು. ಲೆಕ್ಕಪರಿಶೋಧನೆ ಕುರಿತು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕಿ ಎಂ.ಎನ್. ಹೇಮಾವತಿ, ಲೆಕ್ಕಪತ್ರ ನಿರ್ವಹಣೆ ಕುರಿತು ಲೆಕ್ಕಪರಿಶೋಧನಾ ಹಿರಿಯ ಲೆಕ್ಕಪರಿಶೋಧಕ ವೇಣುಗೋಪಾಲ್ ಹಾಗೂ ಸಹಕಾರ ಕಾಯ್ದೆ-ಕಾನೂನು ಕುರಿತು ಕೆ.ಐ.ಸಿ.ಎಂ. ಉಪನ್ಯಾಸಕ ಎಸ್. ಮಹದೇವಪ್ಪ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಕೆ.ಎಂ. ತಮ್ಮಯ್ಯ, ಪಿ.ಬಿ. ಯತೀಶ್, ಎ.ಎಸ್. ಶ್ಯಾಮ್‌ಚಂದ್ರ, ಯೂನಿಯನ್‌ನ ಮಾಜಿ ನಿರ್ದೇಶಕ ಕೆ.ಕೆ. ಮಂದಣ್ಣ, ಕೊಡಗು ಉಪಾಧ್ಯಾಯರ ಸಹಕಾರ ಸ್ಟೊರ‍್ಸ್ನ ಉಪಾಧ್ಯಕ್ಷ ಎ.ವಿ. ಮಂಜುನಾಥ್ ಉಪಸ್ಥಿತರಿದ್ದರು.

ಕಗ್ಗೋಡ್ಲು ದವಸ ಭಂಡಾರದ ಕಾರ್ಯದರ್ಶಿ ಇಂದ್ರಕುಮಾರ್ ಪ್ರಾರ್ಥಿಸಿದರು. ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಸ್ವಾಗತಿಸಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.